ಉಡುಪಿ: ಮುಂದಿನ ಶತಮಾನ ಭಾರತದ್ದು, ಭಾರತದ ಸನಾತನ ಧರ್ಮದ್ದು ಮತ್ತು ಸಂಸ್ಕೃತದ್ದಾಗಿರಲಿದೆ ಎಂದು ಖ್ಯಾತ ಯೋಗ ಗುರು ಬಾಬಾ ರಾಮ್‌ದೇವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಗುರುವಾರ ಉಡುಪಿ ಕೃಷ್ಣಮಠದ ರಾಜಾಂಗಣದಲ್ಲಿ ಬೆಂಗಳೂರಿನ ಭಾರತೀಯ ವಿದ್ವತ್ ಪರಿಷತ್, ನವದೆಹಲಿಯ ಕೇಂದ್ರಿಯ ಸಂಸ್ಕೃತ ವಿಶ್ವವಿದ್ಯಾನಿಲಯ ಮತ್ತು ಪರ್ಯಾಯ ಪುತ್ತಿಗೆ ಮಠದ ಆಶ್ರಯದಲ್ಲಿ ನಡೆಯುತ್ತಿರುವ 3 ದಿನಗಳ 51ನೇ ಅಖಿಲ ಭಾರತ ಪ್ರಾಚ್ಯವಿದ್ಯಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಸಂಸ್ಕೃತದಲ್ಲಿ ಅಧ್ಯಯನ ಮಾಡಿದವರಿಗೆ ಎಲ್ಲ ಆಧುನಿಕ ಜ್ಞಾನ ಲಭ್ಯವಾಗುತ್ತವೆ. ಸಂಸ್ಕೃತದಲ್ಲಿ ಅಧ್ಯಯನ ಮಾಡಿದವರು ವಿಶ್ವಮಾನ್ಯರಾಗುವುದಕ್ಕೆ ಸಾಧ್ಯವಿದೆ ಎಂದ ಅವರು, ಹರಿದ್ವಾರದ ಪತಂಜಲಿ ವಿ.ವಿ.ಯಲ್ಲಿ ಸಂಸ್ಕೃತ ಅಧ್ಯಯನ ಮಾಡಬಯಸುವ ಉಡುಪಿಯ ವಿದ್ಯಾರ್ಥಿಗಳ ಖರ್ಚು ವೆಚ್ಚವನ್ನು ತಾವೇ ನೋಡಿಕೊಳ್ಳುವುದಾಗಿ ರಾಮ್‌ದೇವ್ ಘೋಷಿಸಿದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಅತಿಥೇಯ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, ಪ್ರಾಚೀನ ವಿದ್ಯೆ ಮತ್ತು ವಿದ್ಯಾದೃಷ್ಟಿಕೋನಗಳು ಕಾಲ ಪರೀಕ್ಷೆಗೊಳಗಾಗಿ ಅತ್ಯಂತ ಶ್ರೇಷ್ಠ ಎಂದು ಸಾಬೀತಾಗಿವೆ. ಮತ್ತೆ ಈ ವಿದ್ಯೆ ಅನುಷ್ಠಾನಕ್ಕೆ ಬರಬೇಕಾದುದು ಅತ್ಯಗತ್ಯವಾಗಿದೆ ಎಂದ ಅಭಿಪ್ರಾಯಪಟ್ಟರು.
ಪ್ರಾಚ್ಯ ವಿದ್ಯೆ ಎಂಬುದು ಕೇವಲ ಭಾರತದಲ್ಲಿ ಮಾತ್ರ ಇದೆ, ಬೇರೆ ಯಾವ ದೇಶಗಳಲ್ಲಿ ಪ್ರಾಚ್ಯ ವಿದ್ಯೆ ಎಂಬುದಿಲ್ಲ. ಇಂತಹ ಪ್ರಾಚ್ಯ ವಿದ್ಯೆಗಳ ರಕ್ಷಣೆಯಾಗಬೇಕಾಗಿದೆ. ಪ್ರಾಚ್ಯ ವಿದ್ಯೆ, ಸಂಸ್ಕೃತಿ ಮತ್ತು ಸಂಸ್ಕಾರಗಳ ರಕ್ಷಣೆಯಾಬೇಕಾದರೆ ಮೊದಲು ಸಂಸ್ಕೃತವನ್ನು ರಕ್ಷಣೆ ಮಾಡಬೇಕು ಎಂದವರು ಕರೆ ನೀಡಿದರು.
ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರು, ಭಂಡಾರಕೇರಿ ಮಠದ ಶ್ರೀ ವಿದ್ಯೇಶ ತೀರ್ಥರು, ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥರು ಮತ್ತು ಪುತ್ತಿಗೆ ಮಠದ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥರು ಆಶೀರ್ವಚನ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೂನಾ ವಿಶ್ವ ವಿದ್ಯಾಲಯದ ನಿವೃತ್ತ ಸಂಸ್ಕೃತ ಪ್ರಾಧ್ಯಾಪಕಿ ಪ್ರೊ. ಸರೋಜಾ ಭಾಟೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭಾರತ ಭಾಷಾ ಸಮಿತಿಯ ಅಧ್ಯಕ್ಷ ಪದ್ಮಶ್ರೀ ಚಮು ಕೃಷ್ಣ ಶಾಸ್ತ್ರೀ, ದೆಹಲಿಯ ಕೇಂದ್ರೀಯ ಸಂಸ್ಕೃತ ವಿ.ವಿ.ಯ ಕುಲಪತಿ ಪ್ರೊ. ಶ್ರೀನಿವಾಸ ವರಖೇಡಿ ಆಗಮಿಸಿದ್ದರು.