ಕಲ್ಪೆಟ್ಟ (ಕೇರಳ): ಬಂಡೀಪುರ ಅಭಯಾರಣ್ಯದಲ್ಲಿ ಹಾದು ಹೋಗುವ ಕಲ್ಲಿಕೋಟೆ-ಕೊಳ್ಳೇಗಾಲ ರಾಷ್ಟ್ರೀಯ ಹೆದ್ದಾರಿ 766ರಲ್ಲಿ ವಿಧಿಸಲಾಗಿರುವ ರಾತ್ರಿ ಸಂಚಾರ ನಿಷೇಧದಿಂದ ಸಮಸ್ಯೆ ಆಗುತ್ತಿದೆ ಎಂಬ ವಿಷಯದ ಇತ್ಯರ್ಥಕ್ಕೆ ಕರ್ನಾಟಕ ಪ್ರಯತ್ನಿಸಲಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಕೇರಳದ ವಯನಾಡ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ಪರ ಪಡಿಂಜರೆತಾರಾ ಎಂಬಲ್ಲಿ ಸಭೆ ಉದ್ದೇಶಿಸಿ ಮಾತನಾಡಿದ ಶಿವಕುಮಾರ್, ‘ಪ್ರಿಯಾಂಕಾ 2 ದಿನಗಳ ಹಿಂದೆ ನನಗೆ ಕರೆ ಮಾಡಿದ್ದರು ಹಾಗೂ ಶೀಘ್ರದಲ್ಲೇ ರಾತ್ರಿ ಪ್ರಯಾಣ ನಿಷೇಧಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಕರ್ನಾಟಕಕ್ಕೆ ಭೇಟಿ ನೀಡುವುದಾಗಿ ಹೇಳಿದರು’ ಎಂದರು.
‘ಹೀಗಾಗಿ ರಾತ್ರಿ ಪ್ರಯಾಣದ ನಿರ್ಬಂಧ ಸಮಸ್ಯೆ ಪರಿಹಾರಕ್ಕೆ ಕರ್ನಾಟಕ ಯತ್ನಿಸಲಿದೆ. ನಾನು ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಜತೆ ಚರ್ಚಿಸುವೆ. ನ.13ರಂದು ವಯನಾಡ್ ಚುನಾವಣೆ ಮುಗಿದ ನಂತರ ಕರ್ನಾಟಕ-ಕೇರಳ ಅಧಿಕಾರಿಗಳು ಚರ್ಚಿಸಲಿದ್ದೇವೆ’ ಎಂದು ಡಿಕೆಶಿ ನುಡಿದರು.
ಬಂಡೀಪುರ ಹುಲಿ ರಕ್ಷಿತಾರಣ್ಯದಲ್ಲಿ ರಾತ್ರಿ ವಾಹನ ಸಂಚಾರದಿಂದ ಹುಲಿ ಹಾಗೂ ಕಾಡುಪ್ರಾಣಿಗಳಿಗೆ ತೊಂದರೆ ಆಗುತ್ತದೆ ಎಂದು ಬಹಳ ವರ್ಷ ಹಿಂದೆಯೇ ರಾತ್ರಿ ಸಂಚಾರ ನಿಷೇಧಿಸಲಾಗಿತ್ತು. ಇದನ್ನು ತೆರವು ಮಾಡಬೇಕು ಎಂಬುದು ಕೇರಳಿಗರ ಒತ್ತಾಯವಾಗಿದೆ.