ನವದೆಹಲಿ: ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎನ್ನುವ ದೃಷ್ಟಿಕೋನದಿಂದ ಬೆಳೆಯುತ್ತಿರುವ ಮಕ್ಕಳು ಆರೋಗ್ಯವಾಗಿ ಬೆಳೆಯಬೇಕು ಎಂದು ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತಂದಿವೆ. ಅಂಗನವಾಡಿ ಹಂತದಲ್ಲಿಯೇ ಪೌಷ್ಟಿಕ ಆಹಾರ ಒದಗಿಸುತ್ತಿದ್ದರು ಸಹ ದೇಶದ ಮಕ್ಕಳ್ಳಲ್ಲಿ ಅತಿ ಹೆಚ್ಚು ಆಹಾರದ ಕೊರತೆ ಕಾಡುತ್ತಿದೆ ಎಂದು ವರದಿಯೊಂದು ಬಹಿರಂಗ ಪಡಿಸಿದೆ.
ಹೌದು, ಭಾರತದಲ್ಲಿ 6 ರಿಂದ 23 ತಿಂಗಳು ವಯಸ್ಸಿನ ಶೇ.77 ರಷ್ಟು ಮಕ್ಕಳಲ್ಲಿ ಆಹಾರದ ಕೊರತೆ ಕಾಡುತ್ತಿದೆ ಎಂಬ ಆಘಾತಕಾರಿ ವಿಷಯವನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ತಿಳಿಸಿದೆ. ದೇಶದ ಕೇಂದ್ರ ಭಾಗದಲ್ಲಿ ಆಹಾರ ಕೊರತೆ ಅತಿಹೆಚ್ಚಾಗಿದೆ ಎಂದು ಅಧ್ಯಯನವೊಂದು ತಿಳಿಸಿದೆ.
ಈ ಅಧ್ಯಯನದ ಪ್ರಕಾರ, ‘ಉತ್ತರಪ್ರದೇಶ, ರಾಜಸ್ತಾನ, ಗುಜರಾತ್, ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶ ರಾಜ್ಯಗಳಲ್ಲಿ ಶೇ.80ರಷ್ಟು ಮಕ್ಕಳ ಆಹಾರದಲ್ಲಿ ಅತ್ಯಧಿಕ ಮಟ್ಟದಲ್ಲಿ ಆಹಾರ ಕೊರತೆ ಕಾಣುತ್ತಿದೆ’ ಎಂದು ಹೇಳಿದೆ. ಸಿಕ್ಕಿಂ ಮತ್ತು ಮೇಘಾಲಯದಲ್ಲಿ ಶೇ.50ಕ್ಕಿಂತ ಕಡಿಮೆ ಆಹಾರ ಕೊರತೆಯಿದೆ ಎಂದು ವರದಿ ಹೇಳಿದೆ.
ಈ ಹಿನ್ನೆಲೆಯಲ್ಲಿ ಡಬ್ಲ್ಯುಎಚ್‌ಒ ಮಗುವಿಗೆ ಗುಣಮಟ್ಟದ ಆಹಾರವನ್ನು ನೀಡಲು ಮನವಿ ಮಾಡಿದೆ. ತಾಯಿಯ ಎದೆಹಾಲು, ಮೊಟ್ಟೆಗಳು, ಕಾಳುಗಳು ಮತ್ತು ಬೀಜಗಳು, ಹಣ್ಣುಗಳು ಮತ್ತು ತರಕಾರಿಗಳನ್ನು ಆಹಾರದ ರೂಪದಲ್ಲಿ ನೀಡಲು ಸೂಚಿಸಿದೆ.