ಪ್ರಾಚೀನ ಕಾಲದಿಂದಲೂ ಆಯುರ್ವೇದದಲ್ಲಿ ಅಲೋವೆರಾ (Aloe Vera) ಸಸ್ಯವನ್ನು ಪ್ರಮುಖವಾಗಿ ಬಳಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಆರೋಗ್ಯ ಮತ್ತು ಸೌಂದರ್ಯ ಎರಡಕ್ಕೂ ಅಲೋವೆರಾವನ್ನು ಹೆಚ್ಚಿನ ಜನರು ಬಳಸುತ್ತಿದ್ದಾರೆ. ಅಲೋವೆರಾದಲ್ಲಿ ವಿಟಮಿನ್ ಎ, ಸಿ, ಇ, ಬಿ ಕಾಂಪ್ಲೆಕ್ಸ್, ಜೊತೆಗೆ ಕ್ಯಾಲ್ಸಿಯಂ, ಮೆಗ್ನೀಸಿಯಮ್, ಸತುವಿನಂತಹ ಖನಿಜಗಳು ಮತ್ತು ಅಮೈನೋ ಆಮ್ಲಗಳು ಸಮೃದ್ಧವಾಗಿವೆ. ಆರೋಗ್ಯ ಪ್ರಯೋಜನಗಳಿಗೆ ಹೆಸರುವಾಸಿಯಾದ ಅಲೋವೆರಾ, ಹಲವು ಮನೆಮದ್ದುಗಳ ರೂಪದಲ್ಲಿ ಬಳಕೆಯಾಗುತ್ತದೆ.
ಕಫ ಸಮತೋಲನಕ್ಕೆ ಅಲೋವೆರಾದ ಬಳಕೆ
ಅಲೋವೆರಾ ವಾತ, ಪಿತ್ತ, ಕಫವನ್ನು ಸಮತೋಲನದಲ್ಲಿಡಲು ಸಹಾಯಕ. ಇದು ರಕ್ತಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನೂ ನಿವಾರಿಸುತ್ತದೆ. ಇದಕ್ಕಾಗಿ ಅಲೋವೆರಾದ ಎಲೆ ಅಥವಾ ಒಳಗಿನ ಲೋಳೆಯಂತಹ ಭಾಗವನ್ನು ಬಳಸಬಹುದು. ಈ ಲೋಳೆಗೆ ಸ್ವಲ್ಪ ಉಪ್ಪು ಬೆರೆಸಿ ಸೇವಿಸಬಹುದು. ಅಲೋವೆರಾ ಜ್ಯೂಸ್ ತಯಾರಿಸಿ, ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ 5 ರಿಂದ 20 ಎಂಎಲ್ ಸೇವಿಸಬಹುದು. ಲಿವರ್ ಸಮಸ್ಯೆಗಳು, ಹೆಪಟೈಟೀಸ್‌ನಂತಹ ಕಾಯಿಲೆಗಳಿಗೂ ಅಲೋವೆರಾ ಪರಿಣಾಮಕಾರಿ.
ಮಲಬದ್ಧತೆಗೆ ಅಲೋವೆರಾ: ಒಂದು ಉತ್ತಮ ಔಷಧ
ಅಲೋವೆರಾ ಜೀರ್ಣಕ್ರಿಯೆಯನ್ನು ಸುಧಾರಿಸಿ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆಹಾರ ಸರಿಯಾಗಿ ಜೀರ್ಣವಾಗದಿದ್ದರೆ ಅಥವಾ ಕರುಳಿನ ಸಮಸ್ಯೆ ಉಂಟಾದರೆ ಮಲಬದ್ಧತೆ ಕಾಡಬಹುದು, ಇದು ಮೂಲವ್ಯಾಧಿಗೆ ಕಾರಣವಾಗಬಹುದು. ಇಂತಹ ಸಂದರ್ಭದಲ್ಲಿ ಅಲೋವೆರಾ ಉತ್ತಮ ಪರಿಹಾರ. ರಾತ್ರಿ ಮಲಗುವ ಮುನ್ನ ಅಥವಾ ಬೆಳಗ್ಗೆ ಎದ್ದ ತಕ್ಷಣ ಅಲೋವೆರಾ ಜ್ಯೂಸ್‌ನ್ನು ನಿಯಮಿತವಾಗಿ ಸೇವಿಸಿದರೆ ಮಲಬದ್ಧತೆ ಮತ್ತು ಮೂಲವ್ಯಾಧಿ ಸಮಸ್ಯೆಗಳು ನಿವಾರಣೆಯಾಗುತ್ತವೆ.
ಅಲೋವೆರಾ ಜೆಲ್‌ನಿಂದ ಬಹುಮುಖ ಪರಿಹಾರ
ಡೈಪರ್‌ನಿಂದ ಮಕ್ಕಳ ತೊಡೆಯ ಭಾಗದಲ್ಲಿ ಕೆಂಪು ಗುಳ್ಳೆಯಂತಹ ತುರಿಕೆ, ಉರಿ ಉಂಟಾದರೆ, ಅಲೋವೆರಾ ಜೆಲ್ ಹಚ್ಚುವುದು ಉಪಯುಕ್ತ. ದೊಡ್ಡವರಲ್ಲಿ ದೇಹದ ಮೇಲೆ ಅಲರ್ಜಿ, ತುರಿಕೆ, ದದ್ದು ಕಾಣಿಸಿದರೆ, ಅಲೋವೆರಾ ಜೆಲ್‌ನಿಂದ ಉರಿ ಮತ್ತು ತುರಿಕೆ ಕಡಿಮೆಯಾಗುತ್ತದೆ. ಮೂಗಿನ ರಕ್ತಸ್ರಾವಕ್ಕೆ ಅಲೋವೆರಾವನ್ನು ಮೂಗಿನ ಹೊಳ್ಳೆಗೆ ತಾಗಿಸಿದರೆ ಅಥವಾ ನೆತ್ತಿಗೆ ಹಚ್ಚಿದರೆ ರಕ್ತಸ್ರಾವ ನಿಲ್ಲುತ್ತದೆ.
ಕೂದಲಿನ ಸೌಂದರ್ಯಕ್ಕೆ ಅಲೋವೆರಾ ಎಣ್ಣೆ
ತ್ವಚೆಯ ಆರೈಕೆಯ ಜೊತೆಗೆ ಕೂದಲಿನ ಸೌಂದರ್ಯವನ್ನು ಹೆಚ್ಚಿಸಲು ಅಲೋವೆರಾ ಅತ್ಯುತ್ತಮ. ಅಲೋವೆರಾ ಎಣ್ಣೆ ಕೂದಲಿನ ಸಮಸ್ಯೆಗಳನ್ನು ನಿವಾರಿಸಿ, ನೆತ್ತಿಯನ್ನು ಬಲಪಡಿಸುತ್ತದೆ, ಕೂದಲಿಗೆ ಕಾಂತಿ ನೀಡಿ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಅಲೋವೆರಾ ಎಣ್ಣೆ ತಯಾರಿಕೆಯ ವಿಧಾನವನ್ನು ವಿಡಿಯೋದಲ್ಲಿ (ಕೃಪೆ: SHE studio) ಕಾಣಬಹುದು.
ಸುಲಭ ಅಲೋವೆರಾ ಮನೆಮದ್ದುಗಳು
- ಅಲೋವೆರಾದ ತಿರುಳನ್ನು ರುಬ್ಬಿ, ಜೀರಿಗೆ ಮತ್ತು ಬೆಲ್ಲದ ಪುಡಿಯೊಂದಿಗೆ ಬೆರೆಸಿ, ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಹೊಟ್ಟೆನೋವಿಗೆ ಒಳ್ಳೆಯ ಔಷಧ.
- ಲೋಳೆಸರದ ತಿರುಳನ್ನು ಅರೆದು ಕಣ್ಣರೆಪ್ಪೆಯ ಮೇಲೆ ಇಟ್ಟುಕೊಂಡು ಮಲಗಿದರೆ ಕಣ್ಣುನೋವು ಗುಣವಾಗುತ್ತದೆ.
- ಅಲೋವೆರಾ ರಸಕ್ಕೆ ಅರಿಶಿನ ಬೆರೆಸಿ ಬಾಯಿ ಹುಣ್ಣಿಗೆ ಹಚ್ಚಿದರೆ ಹುಣ್ಣು ಕಡಿಮೆಯಾಗುತ್ತದೆ.
- ಲೋಳೆ ರಸವನ್ನು ಬೆಲ್ಲದೊಂದಿಗೆ ಬೆರೆಸಿ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಋತುಸ್ರಾವದ ಸಮಸ್ಯೆಗಳು ದೂರವಾಗುತ್ತವೆ.
ನೇರವಾಗಿ ಅಲೋವೆರಾ ಜೆಲ್ ಹಚ್ಚುವಿರಾ? ಎಚ್ಚರ!
ಅಲೋವೆರಾದಲ್ಲಿ ಮುಖದ ಕಾಂತಿಯನ್ನು ಹೆಚ್ಚಿಸುವ ಗುಣಗಳಿವೆ, ಆದರೆ ನೇರವಾಗಿ ಮುಖಕ್ಕೆ ಹಚ್ಚಿದರೆ ಕೆಲವರಿಗೆ ಸಮಸ್ಯೆಯಾಗಬಹುದು. ಅಲೋವೆರಾದಲ್ಲಿರುವ ಲ್ಯಾಟೆಕ್ಸ್ ಕೆಲವರಲ್ಲಿ ಚರ್ಮದ ಅಲರ್ಜಿಯನ್ನು ಉಂಟುಮಾಡಬಹುದು. ನೇರವಾಗಿ ಜೆಲ್ ಹಚ್ಚುವುದರಿಂದ ತುರಿಕೆ, ಊತ ಅಥವಾ ಚರ್ಮದ ಕಿರಿಕಿರಿ ಉಂಟಾಗಬಹುದು. ಬಲವಾದ ಸೂರ್ಯನ ಬೆಳಕಿನಲ್ಲಿ ಚರ್ಮ ಕೆಂಪಾಗಿ, ಸನ್‌ಬರ್ನ್ ಅಪಾಯವೂ ಹೆಚ್ಚಾಗಬಹುದು.