Karnataka Ratna Award : ಸರ್ಕಾರವು ದಿವಂಗತ ನಟ ಡಾ. ವಿಷ್ಣುವರ್ಧನ್ ಮತ್ತು ನಟಿ ಬಿ. ಸರೋಜಾದೇವಿ ಅವರಿಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಿ ಗೌರವಿಸಲು ನಿರ್ಧರಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಹಲವು ದಿನಗಳಿಂದ ಅಭಿಮಾನಿಗಳು ಮತ್ತು ಚಿತ್ರರಂಗದವರು ಮಾಡುತ್ತಿದ್ದ ಮನವಿಗೆ ಸರ್ಕಾರ ಈಗ ಸ್ಪಂದಿಸಿದೆ. ಈ ಪ್ರಶಸ್ತಿ ಪ್ರಕಟಣೆಯು ಚಿತ್ರರಂಗದ ಇಬ್ಬರು ಮಹಾನ್ ಕಲಾವಿದರ ಕೊಡುಗೆಯನ್ನು ಸ್ಮರಿಸುವಂತಿದೆ.
ಮೂರು ವರ್ಷಗಳ ಬಳಿಕ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ ಮಾಡಿದ ಸರ್ಕಾರ

ಮೂರು ವರ್ಷಗಳ ಬಳಿಕ ರಾಜ್ಯ ಸರ್ಕಾರವು ಕರ್ನಾಟಕ ರತ್ನ ಪ್ರಶಸ್ತಿಯನ್ನು ಘೋಷಣೆ ಮಾಡಿದೆ. ಅದರಲ್ಲೂ ಸಿನಿಮಾ ಕ್ಷೇತ್ರದ ಇಬ್ಬರು ಸಾಧಕರನ್ನು ಗುರುತಿಸಿದ್ದು, ನಟ ವಿಷ್ಣುವರ್ಧನ್ ಹಾಗೂ ನಟಿ ಸರೋಜಾದೇವಿ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಲು ನಿರ್ಧರಿಸಿದೆ. ನಟರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವ ಬಗ್ಗೆ ಗುರುವಾರ (ಸೆಪ್ಟೆಂಬರ್ 11) ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು. ಪ್ರಶಸ್ತಿಯನ್ನು ಯಾವಾಗ, ಎಲ್ಲಿ ಪ್ರದಾನ ಮಾಡಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ಧರಿಸಲಿದೆ.
ವಿಷ್ಣುವರ್ಧನ್ಗೆ ಕರ್ನಾಟಕ ರತ್ನ ಪ್ರಶಸ್ತಿ: ಅಭಿನಂದನೆಗಳ ಸುರಿಮಳೆ

ಕನ್ನಡದ ನಟ ವಿಷ್ಣುವರ್ಧನ್ ಅವರು ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ. ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು ಎಂಬುದು ಅಭಿಮಾನಿಗಳು ಹಾಗೂ ಕುಟುಂಬದವರ ಒತ್ತಾಯ ಆಗಿತ್ತು. ಸರ್ಕಾರ ಆ ಮನವಿಯನ್ನು ಪುರಸ್ಕರಿಸಿದೆ. ವಿಷ್ಣುವರ್ಧನ್ ಹಾಗೂ ಬಿ. ಸರೋಜಾದೇವಿ ಅವರಿಗೆ ಮರಣೋತ್ತವರಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿ ಘೋಷಿಸಲಾಗಿದೆ. ಈ ಸುದ್ದಿ ತಿಳಿದ ಕೂಡಲೇ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಕೋಟಿಗೊಬ್ಬ ಸಿನಿಮಾದ ಹಾಡಿನ ದೃಶ್ಯವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ವಿಷ್ಣುವರ್ಧನ್ ಅವರ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.




