ಕನ್ನಡ ಬಿಗ್‌ಬಾಸ್ ಸೀಸನ್ 11ರಲ್ಲಿ ಕುರಿಗಾಹಿ ಹಾಡುಗಾರ ಹನುಮಂತು ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ತನ್ನ ಸರಳತೆ, ಮುಗ್ಧತೆಯಿಂದಲೇ ಕನ್ನಡಿಗರ ಮನಗೆದ್ದಿದ್ದ ಹನುಮಂತು ಬಿಗ್‌ಬಾಸ್ 11ರಲ್ಲಿ ಗೆಲ್ಲಬೇಕು ಎಂದು ಲಕ್ಷಾಂತರ ಮಂದಿ ಕನ್ನಡಿಗರು ಮನಸಾರೆ ಹಾರೈಸಿದ್ದರು. ಅದರಂತೆ ಹನುಮಂತು ವಿನ್ನರ್ ಎಂದು ಕಿಚ್ಚ ಸುದೀಪ್ ಕೈ ಎತ್ತುವ ಮೂಲಕ ಘೋಷಿಸಿದರು.
ಮೂರನೇ ರನ್ನರ್ ಅಪ್ ಆಗಿ ಮೋಕ್ಷಿತಾ ಹೊರಬಂದ ಬಳಿಕ ಹನುಮಂತು, ತ್ರಿವಿಕ್ರಮ್ ಹಾಗೂ ರಜತ್ ಕೊನೆಯ ಸ್ಪರ್ಧಿಗಳಾಗಿ ಮನೆಯಲ್ಲಿ ಉಳಿದಿದ್ದರು. ಬಳಿಕ ರಜತ್ ಎರಡನೇ ರನ್ನರ್ ಅಪ್ ಆಗಿ ಎಲಿಮನೇಟ್ ಆಗಿದ್ದು, ಕೊನೆಯದಾಗಿ ತ್ರಿವಿಕ್ರಮ್ ಹಾಗೂ ಹನುಮಂತು ಉಳಿದುಕೊಂಡಿದ್ದರು.
ಬಳಿಕ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿರೂಪಕ ಕಿಚ್ಚ ಸುದೀಪ್ ಇಬ್ಬರ ಕೈಯನ್ನೂ ಹಿಡಿದುಕೊಂಡು ಕೊನೆಗೆ ಹನುಮಂತು ಕೈ ಮೇಲೆತ್ತುವ ಮೂಲಕ ಸೀಸನ್ 11ರ ವಿನ್ನರ್ ಎಂದು ಘೋಷಣೆ ಮಾಡಿದರು. ಇದರೊಂದಿಗೆ ತನ್ನ ಸರಳತೆಯಿಂದಲೇ ಪ್ರೇಕ್ಷಕರ ಮನ ಗೆದ್ದಿದ್ದ ಹನುಮಂತು ಕೊನೆಗೂ ಬಿಗ್‌ಬಾಸ್ ಸೀಸನ್ 11ರ ವಿನ್ನರ್ ಆಗಿ ಹೊರಹೊಮ್ಮಿದರು.
ಇನ್ನು ಈ ಸೀಸನ್ ಕಿಚ್ಚ ಸುದೀಪ್ ಅವರ ನಿರೂಪಣೆಯ ಕೊನೆಯ ಬಿಗ್‌ಬಾಸ್ ಕಾರ್ಯಕ್ರಮವಾಗಿದ್ದು, ಇದರೊಂದಿಗೆ ಬಿಗ್‌ಬಾಸ್ ಕಾರ್ಯಕ್ರಮದಿಂದ ಕಿಚ್ಚ ಸುದೀಪ್ ಹೊರಬಂದಂತಾಗಿದೆ.