ವಿಜಯನಗರ: ಬೇಲೂರು, ಹಳೇಬಿಡು ಸೇರಿ 41 ಸ್ಮಾರಕಗಳನ್ನು ವಿಶ್ವಪರಂಪರೆ ತಾಣಗಳೆಂದು ಪರಿಗಣಿಸಲು ಯುನೆಸ್ಕೋಗೆ ಪ್ರಸ್ತಾವನೆ ಸಲ್ಲಿಕೆ; ಕೇಂದ್ರ ಪ್ರವಾಸೋದ್ಯಮ ಸಚಿವ ಜಿ.ಕಿಶನ್ ರೆಡ್ಡಿ

Union Tourism Minister G Kishan Reddy VIJAYAPRABHA NEWS Union Tourism Minister G Kishan Reddy VIJAYAPRABHA NEWS

ಹಂಪಿ(ವಿಜಯನಗರ ಜಿಲ್ಲೆ),ಫೆ.25: ಕರ್ನಾಟಕ ರಾಜ್ಯದಲ್ಲಿರುವ ಹೋಯ್ಸಳ ವಾಸ್ತುಶಿಲ್ಪ ಶೈಲಿಯ ಬೇಲೂರು,ಹಳೇಬಿಡು,ಸೋಮನಾಥಪುರ ಸೇರಿದಂತೆ ದೇಶದಲ್ಲಿರುವ 41 ಸ್ಮಾರಕಗಳನ್ನು ವಿಶ್ವಪರಂಪರೆ ತಾಣಗಳೆಂದು ಗುರುತಿಸುವಂತೆ ಕೋರಿ ಯುನೆಸ್ಕೋಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕೇಂದ್ರ ಪ್ರವಾಸೋದ್ಯಮ, ಸಂಸ್ಕೃತಿ, ಈಶಾನ್ಯ ರಾಜ್ಯಗಳ ಪ್ರದೇಶಾಭಿವೃದ್ಧಿ ಸಚಿವ ಜಿ. ಕಿಶನ್ ರೆಡ್ಡಿ ಅವರು ಹೇಳಿದರು.

ಆಜಾದಿ ಕಾ ಅಮೃತ ಮಹೋತ್ಸವದ ಭಾಗವಾಗಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ(ಎಎಸ್‍ಐ)ಯು ಹಂಪಿಯ ಪಟ್ಟಾಭಿರಾಮ ದೇವಸ್ಥಾನದ ಆವರಣದಲ್ಲಿ ಎರಡು ದಿನಗಳ ಕಾಲ “ದೇವಯಾತನಂ-ಭಾರತೀಯ ದೇವಾಲಯ ವಾಸ್ತುಶಿಲ್ಪ ಅದ್ಭುತ ಮಹಾಕಾವ್ಯ’’ ಕುರಿತು ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ವರ್ಷ ರಾಜ್ಯದ ಹೋಯ್ಸಳ ವಾಸ್ತು ಶಿಲ್ಪಶೈಲಿಯ ಬೇಲೂರು,ಹಳೇಬಿಡು,ಸೋಮನಾಥಪುರ ಸ್ಮಾರಕಗಳು ವಿಶ್ವಪರಂರೆ ತಾಣಗಳ ಪಟ್ಟಿಗೆ ಸೇರುವ ಸಾಧ್ಯತೆ ಇದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಸಚಿವ ಕಿಶನ್‍ರೆಡ್ಡಿ ಅವರು ಕೇಂದ್ರ ಪುರಾತತ್ವ ಇಲಾಖೆಯು ಎಲ್ಲ ರೀತಿಯ ಸಿದ್ಧತೆಗಳನ್ನು ಆರಂಭಿಸಿದೆ. ಶೀಘ್ರ ಯುನೆಸ್ಕೋ ತಂಡ ಭೇಟಿ ನೀಡಿ ಪರಿಶೀಲಿಸಲಿದೆ ಎಂದರು. ಸದ್ಯ ದೇಶದಲ್ಲಿ 40 ವಿಶ್ವಪರಂರೆಯ ತಾಣಗಳು ಯುನೆಸ್ಕೋದಿಂದ ಗುರುತಿಸಲ್ಪಟ್ಟಿವೆ ಎಂದರು.

Advertisement

*ದೇವಾಲಯಗಳು ಕಟ್ಟಡಗಳು ಮಾತ್ರವಲ್ಲ;ಸಮಾನತೆಯ ಕೇಂದ್ರಗಳು: ದೇಶದಲ್ಲಿರುವ ದೇವಾಲಯಗಳು ಕೇವಲ ಕಟ್ಟಡಗಳಲ್ಲ;ಅವುಗಳು ಏಕತೆ ಮತ್ತು ಸಮಾನತೆಯ ಕೇಂದ್ರಗಳು ಮತ್ತು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಅನೇಕ ಹೋರಾಟಗಾರರಿಗೆ ಸ್ಪೂರ್ತಿಯ ಕೇಂದ್ರಗಳಾಗಿದ್ದವು ಎಂದು ಬಣ್ಣಿಸಿದ ಸಚಿವ ಕಿಶನ್‍ರೆಡ್ಡಿ ಅವರು ದೇವಾಲಯಗಳು ಮತ್ತು ಅವುಗಳ ವಾಸ್ತುಶಿಲ್ಪದಲ್ಲಿ ಕಲಾಶ್ರೀಮಂತಿಕೆ, ಶಿಲ್ಪಶಾಸ್ತ್ರ,ವಿಜ್ಞಾನ,ಗಣಿತವೂ ಅಡಗಿದೆ ಎಂದರು.

ದೇವಾಲಯಗಳು ಜೀವನದ ಮತ್ತು ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದ್ದು,ಅವುಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ.ಜನತೆಗೆ ದೇವಾಲಯಗಳಿಂದ ಶಿಕ್ಷಣ,ಧರ್ಮ,ಸ್ಥಳೀಯರಿಗೆ ಆರ್ಥಿಕ ಅಭಿವೃದ್ಧಿ ದೊರೆಯಲಿದೆ ಎಂದು ವಿವರಿಸಿದ ಸಚಿವ ಕಿಶನ್‍ರೆಡ್ಡಿ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೇಳಿದಂತೆ ವಿಕಾಶ್,ವಿರಾಸತ್,ವಿಶ್ವಾಸ್,ವಿಜ್ಞಾನ ಮತ್ತು ವಿಶ್ವಗುರು ಮೂಲಕ ದೇಶ ಮುನ್ನಡೆಯಬೇಕು ಎಂದು ಪ್ರತಿಪಾದಿಸಿದರು. ಈ ಅಂಶಗಳ ಮೂಲಕ ದೇಶ ಸ್ವಾತಂತ್ರ್ಯ ಬಂದು 100 ವರ್ಷದ ಸಂಭ್ರಮದಲ್ಲಿರುವ 2047ರಲ್ಲಿ ಭಾರತ ವಿಶ್ವಗುರುವಾಗಿ ಜಗತ್ತನ್ನೇ ಮುನ್ನಡೆಸಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ಈ ಬಾರಿಯ ಬಜೆಟ್‍ನಲ್ಲಿ ಕೇಂದ್ರ ಸರಕಾರ ದೇವಾಲಯಗಳ ಅಭಿವೃದ್ಧಿಗೆ 7 ಸಾವಿರ ಕೋಟಿ ರೂ.ಗಳನ್ನು ಮೀಸಲಿಟ್ಟಿದೆ ಎಂದರು.

ಆಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿದ್ದು,ಇನ್ನೇರಡು ವರ್ಷಗಳಲ್ಲಿ ಶ್ರೀರಾಮನ ದರ್ಶನ ಸಿಗಲಿದೆ. ಕಾಶಿ ಜೀರ್ಣೋದ್ಧಾರ ಮಾಡುವುದರ ಮೂಲಕ ನಮ್ಮ ಸರಕಾರ ದಿವ್ಯಕಾಶಿ ಮಾಡಿದೆ,ಕೇದಾರನಾಥ ದೇವಾಲಯ ಜೀರ್ಣೋದ್ಧಾರ, ಶ್ರೀ ರಾಮಾನುಜಾಚಾರ್ಯರ ಬೃಹತ್ ಪ್ರತಿಮೆ ಸ್ಥಾಪನೆ ಮಾಡಲಾಗಿದೆ ಎಂದು ವಿವರಿಸಿದ ಸಚಿವ ಕಿಶನ್‍ರೆಡ್ಡಿ ಅವರು ಅಂಜನಾದ್ರಿಯಲ್ಲಿ ಭವ್ಯಮಂದಿರ ನಿರ್ಮಾಣ ಮಾಡಲಾಗುವುದು ಎಂದರು.

*ಸ್ಮಾರಕಗಳ ಸಂರಕ್ಷಣೆ,ಜೀರ್ಣೋದ್ಧಾರ ದತ್ತು ನೀಡಿಕೆಗೆ ವಿಶೇಷ ಒತ್ತು ನೀಡಲು ನಿರ್ಧಾರ: ಮುಂದಿನ ದಿನಗಳಲ್ಲಿ ದೇಶದಲ್ಲಿರುವ ಕೇಂದ್ರ ಪುರಾತತ್ವ ಅಧೀನದಲ್ಲಿರುವ ಸ್ಮಾರಕಗಳ ಸಂರಕ್ಷಣೆ,ಜೀರ್ಣೋದ್ಧಾರ ಮತ್ತು ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸಂಘ-ಸಂಸ್ಥೆಗಳಿಗೆ,ಕಂಪನಿಗಳಿಗೆ ಮತ್ತು ವ್ಯಕ್ತಿಗಳಿಗೆ ದತ್ತು ನೀಡಲು ವಿಶೇಷ ಒತ್ತು ನೀಡಲಾಗುವುದು ಎಂದು ಕೇಂದ್ರ ಪ್ರವಾಸೋದ್ಯಮ, ಸಂಸ್ಕೃತಿ ಸಚಿವ ಕಿಶನ್‍ರೆಡ್ಡಿ ಅವರು ತಿಳಿಸಿದರು.

ಸ್ಮಾರಕಗಳ ಸಂರಕ್ಷಣೆ,ಅಭಿವೃದ್ಧಿ ಮತ್ತು ಅಗತ್ಯ ಸೌಲೌಭ್ಯ ಕಲ್ಪಿಸುವ ನಿಟ್ಟಿನಲ್ಲಿ ದತ್ತು ನೀಡಿಕೆಗೆ ವಿಶೇಷ ಒತ್ತು ನೀಡುವುದರ ಜೊತೆಗೆ ಜನರು ಸಹ ಈ ಸ್ಮಾರಕಗಳ ಸಂರಕ್ಷಣಾ ಕಾರ್ಯದಲ್ಲಿ ಭಾಗಿಯಾಗುವಂತೆ ನೋಡಿಕೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಕಂಪನಿಗಳ ಸಿಎಸ್‍ಆರ್ ಅಡಿಯೂ ಸ್ಮಾರಕಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಕ್ರಮವಹಿಸಲಾಗುವುದು ಎಂದರು.

ಈ ಸಮ್ಮೇಳನದಲ್ಲಿ ನಮ್ಮಲ್ಲಿನ ದೇವಾಲಯಗಳ ವಾಸ್ತುಶಿಲ್ಪ ಮತ್ತು ಶ್ರೀಮಂತಿಕೆ,ಸಂರಕ್ಷಿಸುವುದು ಹೇಗೆ, ಈ ಹಿಂದೆ ಯಾವ ರೀತಿಯ ತಂತ್ರಜ್ಞಾನ ಬಳಸಲಾಗಿತ್ತು;ಈಗ ಹೇಗೆ ಬದಲಾಗಿದೆ ಎಂಬುದರ ಕುರಿತು ಅರ್ಥಪೂರ್ಣ ಚರ್ಚೆ ನಡೆಯಲಿದೆ ಎಂದರು.

ಶಿಲ್ಪಕಲಾ ಸ್ಮಾರಕಗಳ ಸ್ವಾರ್ಥಕ್ಕೆ ನಾಶಮಾಡದಿರಿ;ಸಂರಕ್ಷಿಸುವ ಕೆಲಸ ಮಾಡಿ:

ಹಂಪಿಯ ಶಿಲ್ಪಕಲಾ ಸ್ಮಾರಕಗಳ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದ ಪ್ರವಾಸೋದ್ಯಮ,ಪರಿಸರ,ಜೀವಿಶಾಸ್ತ್ರ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ವಿಜಯನಗರ ಕ್ಷೇತ್ರದ ಶಾಸಕ ಆನಂದಸಿಂಗ್ ಅವರು ಸ್ವಾರ್ಥಕ್ಕೆ ಶಿಲ್ಪಕಲಾ ಸ್ಮಾರಕಗಳನ್ನು ನಾಶಮಾಡುವ ಕೆಲಸ ಮಾಡಬೇಡಿ ಎಂದು ಅವರು ಮನವಿ ಮಾಡಿದರು.

ಯಾವುದೇ ರೀತಿಯ ತಂತ್ರಜ್ಞಾನ ಇಲ್ಲದ ಕಾಲದಲ್ಲಿಯೂ ನಮ್ಮ ರಾಜರಲ್ಪಿಡೀ ಜಗತ್ತು ತನ್ನೆತ್ತ ನೋಡುವಂತ ಅದ್ಭುತವಾದ ವಾಸ್ತುಶಿಲ್ಪಶೈಲಿಯ ಸ್ಮಾರಕಗಳನ್ನು ನಿರ್ಮಿಸಿದ್ದಾರೆ;ಆದರೇ ಜನರು ತಮ್ಮ ಸ್ವಾರ್ಥಕ್ಕಾಗಿ ಕ್ವಾರಿಯಂತ ಕಾರ್ಯ ನಿಲ್ಲಿಸಬೇಕು ಎಂದು ಮನವಿ ಮಾಡಿದ ಅವರು ಈ ಮೂಲಕ ನಮ್ಮ ಸಂಸ್ಕೃತಿ, ಕಲಾವೈಭವ, ವಾಸ್ತುಶಿಲ್ಪ ಶ್ರೀಮಂತಿಕೆ ಜಗತ್ತಿಗೆ ತೋರಿಸುವ ಮತ್ತು ಮುಂದಿನ ಪೀಳಿಗೆಗೆ ತೋರಿಸುವ ಕೆಲಸ ಮಾಡಬೇಕು ಎಂದರು. ಹಂಪಿಯ ವಾಸ್ತುಶಿಲ್ಪ ವೈಭವದ ಕುರಿತು ಆಳ ಅಧ್ಯಯನ ಮಾಡಿ ಸಂರಕ್ಷಿಸುವ ಕೆಲಸ ಮಾಡಬೇಕು ಎಂದರು.

*ಹಂಪಿ ಶಿಲ್ಪಕಲೆಯ ಜೀವಂತ ವಿಶ್ವವಿದ್ಯಾಲಯ: ಹಂಪಿಯು ಶಿಲ್ಪಕಲೆಯ ಜೀವಂತ ವಿಶ್ವವಿದ್ಯಾಲಯ ಎಂದು ಸಾರಿಗೆ,ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಬಣ್ಣಿಸಿದರು.

ಹಂಪಿ ಜಗತ್ತಿನ ಅದ್ಭುತ,ಜೀವಂತ ಮ್ಯೂಸಿಯಂ ಆಗಿದೆ. ರಾಜ್ಯದ ಪ್ರವಾಸೋದ್ಯಮಕ್ಕೆ ಮುಖಟ ಪ್ರಾಯದ ಕಿರಿಟ ಹಂಪಿಯಾಗಿದೆ.ಇಲ್ಲಿನ ಪ್ರತಿಕಲ್ಲಿನಲ್ಲಿಯೂ ಕಲಾವೈವಿಧ್ಯತೆ ಮತ್ತು ಕಲಾವೈಭವವನ್ನು ಕಾಣಬಹುದಾಗಿದೆ. ವಿಶ್ವದಲ್ಲಿ ತನ್ನದೇ ಆದ ಮಹತ್ವದ ಸ್ಥಾನವನ್ನು ಪಡೆದುಕೊಂಡಿದೆ ಎಂದರು.

ಇಲ್ಲಿನ ಸ್ಮಾರಕಗಳ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಬಣ್ಣಿಸಿದ ಸಚಿವ ಶ್ರೀರಾಮುಲು ಅವರು ಹಂಪಿಯ ವಾಸ್ತುಶಿಲ್ಪಕಲೆ ಮತ್ತು ಕಲಾಶ್ರೀಮಂತಿಕೆಯನ್ನು ಜಗತ್ತಿಗೆ ಪರಿಚಯಿಸುವ ಕೆಲಸ ಕೇಂದ್ರ ಮತ್ತು ರಾಜ್ಯ ಸರಕಾರಗಳು ಮಾಡಲಿವೆ ಎಂದರು.

ಕೇಂದ್ರ ಸಂಸ್ಕೃತಿ ಖಾತೆ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್, ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರರೆಡ್ಡಿ, ರಾಜ್ಯ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಪಂಕಜಕುಮಾರ ಪಾಂಡೆ, ಕನ್ನಡ ವಿವಿ ಕುಲಪತಿ ಪ್ರೊ.ಬಿ.ರಮೇಶ ಅವರು ಮಾತನಾಡಿದರು. ಕೇಂದ್ರ ಪುರಾತತ್ವ ಇಲಾಖೆಯ ಮಹಾನಿರ್ದೇಶಕರಾದ ವಿ.ವಿದ್ಯಾವತಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ದೇಶದಾದ್ಯಂತ ಇರುವ 75 ದೇವಾಲಯಗಳ ವಾಸ್ತುಶಿಲ್ಪ ವೈಭವ ಕುರಿತ ಪುಸ್ತಕಗಳನ್ನು ಕೇಂದ್ರ ಪ್ರವಾಸೋದ್ಯಮ,ಸಂಸ್ಕೃತಿ ಸಚಿವ ಕಿಶನ್‍ರೆಡ್ಡಿ ಅವರು ಬಿಡುಗಡೆ ಮಾಡಿದರು.

ನಂತರ “ದೇವಯಾತನಂ-ಭಾರತೀಯ ದೇವಾಲಯ ವಾಸ್ತುಶಿಲ್ಪ ಅದ್ಭುತ ಮಹಾಕಾವ್ಯ’’ ಕುರಿತ ಗೋಷ್ಠಿಗಳು ಕನ್ನಡ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ನಡೆದವು. ಆಗ್ನೇಯ ಏಷ್ಯಾದ ದೇಶಗಳ ಸುಮಾರು 30 ಹೆಸರಾಂತ ವಿದ್ವಾಂಸರು ಮತ್ತು ರಾಯಭಾರಿಗಳು ಪ್ರಾಚೀನ ದೇವಾಲಯದ ವಾಸ್ತುಶಿಲ್ಪದ ಬಗ್ಗೆ ತಮ್ಮ ಜ್ಞಾನವನ್ನು ಹಂಚಿಕೊಳ್ಳಲು ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment

Leave a Reply

Your email address will not be published. Required fields are marked *

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement