ಉತ್ತರ ಪ್ರದೇಶ: ಉತ್ತರ ಪ್ರದೇಶದ ಪ್ರಯಾಗ್ ರಾಜ್-ಮಿರ್ಜಾಪುರ ಹೆದ್ದಾರಿಯಲ್ಲಿ ಶುಕ್ರವಾರ ಮಧ್ಯರಾತ್ರಿಯ ಸುಮಾರಿಗೆ ಛತ್ತೀಸ್ಗಢದಿಂದ ಮಹಾ ಕುಂಭ ಭಕ್ತರನ್ನು ಕರೆದೊಯ್ಯುತ್ತಿದ್ದ ಕಾರು ಬಸ್ ಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ ಮತ್ತು 19 ಮಂದಿ ಗಾಯಗೊಂಡಿದ್ದಾರೆ. ರಾತ್ರಿ ಬೊಲೆರೊ ಚಾಲಕ ನಿದ್ದೆ ಹೋಗಿ ವಾಹನದ ನಿಯಂತ್ರಣ ಕಳೆದುಕೊಂಡ ಪರಿಣಾಮ ಈ ಅಪಘಾತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.
ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ವರೂಪ್ ರಾಣಿ ನೆಹರೂ ವೈದ್ಯಕೀಯ ಆಸ್ಪತ್ರೆಗೆ ಕಳುಹಿಸಲಾಗಿದೆ ಮತ್ತು ಮುಂದಿನ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಡಿಸಿಪಿ ಯಮುನಾನಗರ ವಿವೇಕ್ ಚಂದ್ರ ಯಾದವ್ ತಿಳಿಸಿದ್ದಾರೆ.
ಮಿರ್ಜಾಪುರ-ಪ್ರಯಾಗ್ ರಾಜ್ ಹೆದ್ದಾರಿಯಲ್ಲಿ ಬೆಳಿಗ್ಗೆ 2 ಗಂಟೆ ಸುಮಾರಿಗೆ ಪ್ರಯಾಗ್ ರಾಜ್ ನ ಮೇಜಾ ಪೊಲೀಸ್ ಠಾಣೆಯ ಬಳಿ ಬೊಲೆರೊ ಕಾರು ಬಸ್ ಗೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ.
ಮೃತ ಭಕ್ತರು ಕುಂಭದ ಸಮಯದಲ್ಲಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲು ಛತ್ತೀಸ್ಗಢದ ಕೊರ್ಬಾದಿಂದ ಪ್ರಯಾಣಿಸುತ್ತಿದ್ದರು. ಅಪಘಾತಕ್ಕೀಡಾದ ಬಸ್ ಮಧ್ಯಪ್ರದೇಶದ ರಾಜಗಢದಿಂದ ಯಾತ್ರಿಕರನ್ನು ಹೊತ್ತೊಯ್ಯುತ್ತಿತ್ತು ಎಂದು ವರದಿಯಾಗಿದೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘಟನೆ ಕುರಿತು ಮಾಹಿತಿ ಪಡೆದುಕೊಂಡಿದ್ದು, ಸ್ಥಳಕ್ಕೆ ತಲುಪಲು ಮತ್ತು ಪರಿಹಾರ ಕಾರ್ಯಗಳನ್ನು ತ್ವರಿತಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಗಾಯಾಳುಗಳಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.