ಬೆಂಗಳೂರು: ಬೆಂಗಳೂರು ನಿವಾಸಿಯಾದ ಹಿರಿಯ ನಾಗರಿಕರೊಬ್ಬರು ವಾಟ್ಸಾಪ್ ವೀಡಿಯೋ ಕರೆ ನಂತರ ಸೈಬರ್ ವಂಚನೆಗೆ ಒಳಗಾಗಿ ₹1.94 ಕೋಟಿ ಕಳೆದುಕೊಂಡಿದ್ದಾರೆ. ವಂಚಕನೊಬ್ಬ ಪೊಲೀಸ್ ಅಧಿಕಾರಿ ಎಂದು ನಟಿಸುತ್ತ, ಪೊಲೀಸ್ ಹಿನ್ನೆಲೆಯೊಂದಿಗೆ ನಂಬಿಕೆ ಮೂಡಿಸಿ, ಬ್ಲ್ಯಾಕ್ಮೇಲ್ ಪ್ರಕರಣದಲ್ಲಿ ನಿಮ್ಮ ಹೆಸರು ಕೇಳಿ ಬಂದಿದೆ ಎಂದು ಉದ್ಯಮಿ ನರೇಶ್ ಗೋಯಲ್ ಎಂಬುವವರನ್ನು ನಂಬಿಸಿದ್ದಾರೆ. ಈ ಆರೋಪದಿಂದ ಹೈರಾಣಗೊಂಡ ಉದ್ಯಮಿ ವಂಚಕನ ಮಾತು ನಂಬಿದ್ದಾರೆ.
ವಂಚಕರು ತಮ್ಮ ಮೋಸದ ಜಾಲವನ್ನು ಮುಂದುವರೆಸಿ, ಹಣದ ಸುಲಿಗೆಗೆ ಬಳಕೆ ಮಾಡಲಾದ 247 ಎಟಿಎಂ ಕಾರ್ಡ್ಗಳನ್ನು ಪತ್ತೆ ಹಚ್ಚಿದ್ದು, ಅದರಲ್ಲಿ ಒಂದು ನಿಮ್ಮ ಹೆಸರಿನಲ್ಲಿದೆ ಎಂದು ನಂಬಿಸಿದ್ದಾರೆ. ಹೀಗಾಗಿ ತನಿಖೆಯಲ್ಲಿ ಸಹಕರಿಸಲು ಒತ್ತಾಯಿಸಿ ನಿಮ್ಮನ್ನು ಮನೆಯಲ್ಲಿಯೇ “ಡಿಜಿಟಲ್ ಬಂಧನ” ಮಾಡುತ್ತಿದ್ದು, ಎಲ್ಲಿಯೂ ಹೋಗುವಂತಿಲ್ಲ ಹಾಗೂ ಯಾರೊಂದಿಗೂ ಈ ವಿಚಾರವನ್ನು ಚರ್ಚಿಸುವಂತಿಲ್ಲ ಎಂದು ಸೂಚನೆ ನೀಡಿದ್ದರು. ಬಳಿಕ ಏಳು ದಿನಗಳ ಕಾಲ ಹಂತ ಹಂತವಾಗಿ ವೃದ್ಧನಿಂದ ಹಣ ವರ್ಗಾಯಿಸಿಕೊಂಡಿದ್ದು ಅನುಮಾನ ಬಾರದಂತೆ ನಟಿಸಿದ್ದಾರೆ.
ಇತ್ತೀಚೆಗೆ, ವೃದ್ಧ ಉದ್ಯಮಿ ತಮ್ಮ ಮಗಳಿಗೆ ಡಿಜಿಟಲ್ ಅರೆಸ್ಟ್ ಕುರಿತು ಹೇಳಿದಾಗ, ವಂಚನೆ ಬೆಳಕಿಗೆ ಬಂದಿದೆ. ಕೂಡಲೇ ಅವರು ಮಗಳ ಸಹಾಯದಿಂದ ಬೆಂಗಳೂರಿನ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಈ ಘಟನೆಯು ವಂಚಕರು “ಡಿಜಿಟಲ್ ಬಂಧನ” ಹಾಗೂ ಇತರ ಸುಳ್ಳು ತಂತ್ರಗಳನ್ನು ಬಳಸಿಕೊಂಡು ಜನರನ್ನು ಹೇಗೆ ಮೋಸಗೊಳಿಸುತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ. ಹೀಗಾಗಿ ಸಾರ್ವಜನಿಕರು ಮಹತ್ವದ ಮಾಹಿತಿ ರಕ್ಷಿಸಿಕೊಳ್ಳಿ ಹಾಗೂ ವಂಚನೆ ನಡೆದಾಗ ತಕ್ಷಣವೇ ಅಧಿಕಾರಿಗಳಿಗೆ ಮಾಹಿತಿ ನೀಡಿ ಎಂದು ಪೊಲೀಸರು ತಿಳಿಸಿದ್ದಾರೆ.