ಬೆಂಗಳೂರು: ಕೆಲಸ ಮಾಡುತ್ತಿದ್ದ ಮನೆಯಲ್ಲೇ ಬರೋಬ್ಬರಿ 25 ಲಕ್ಷದ ಆಭರಣ ಕಳ್ಳತನ ಮಾಡಿ ಮಹಿಳೆಯೋರ್ವಳು ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ. ನಗರದ ವನ್ನಾರಪೇಟೆ ನಿವಾಸಿ ಶಾಂತಿ(30) ಬಂಧಿತ ಆರೋಪಿ ಮಹಿಳೆಯಾಗಿದ್ದಾಳೆ.
ಮೇಕಪ್ ಆರ್ಟಿಸ್ಟ್ ಒಬ್ಬರ ಮನೆಯಲ್ಲಿ ಮನೆಗೆಲಸದಾಕೆಯಾಕೆ ಈಕೆ ಕೆಲಸ ಮಾಡುತ್ತಿದ್ದಳು. ಮನೆಯವರೊಂದಿಗೆ ಒಳ್ಳೆಯ ರೀತಿಯಿಂದ ನಡೆದುಕೊಂಡು ಅವರ ವಿಶ್ವಾಸ ಗಳಿಸಿಕೊಂಡಿದ್ದಳು. ಬಳಿಕ ಹಂತ-ಹಂತವಾಗಿ ವಜ್ರದ ಆಭರಣ, ಚಿನ್ನಾಭರಣ, ಬೆಳ್ಳಿಯ ವಸ್ತುಗಳನ್ನು ಕದ್ದೊಯ್ದಿದ್ದಾಳೆ.
ಮನೆಯವರು ಇತ್ತೀಚೆಗೆ ಮನೆಯ ಕಪಾಟು ತೆರೆದು ಆಭರಣಗಳನ್ನು ಪರಿಶೀಲಿಸಿದಾಗ ಕಳವು ಪ್ರಕರಣ ಬೆಳಕಿಗೆ ಬಂದಿದ್ದು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶಂಕೆಯ ಮೇರೆಗೆ ಕೆಲಸದಾಕೆ ಶಾಂತಿಯನ್ನು ವಿಚಾರಣೆ ನಡೆಸಿದಾಗ ಆಭರಣ ಕಳ್ಳತನವನ್ನು ಒಪ್ಪಿಕೊಂಡಿದ್ದಾಳೆ.
ಮನೆಗೆಲಕೆಸದಾಕೆಯಿಂದ 229 ಗ್ರಾಂ ಚಿನ್ನಾಭರಣ, 21.41 ಗ್ರಾಂ ವಜ್ರಾಭರಣ ಹಾಗೂ 37.28 ಗ್ರಾಂ ಬೆಳ್ಳಿಯ ವಸ್ತುಗಳನ್ನು ಜಪ್ತು ಮಾಡಲಾಗಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆಭರಣಗಳನ್ನು ಮನೆಯವರಿಗೆ ಹಸ್ತಾಂತರಿಸಿದ್ದಾರೆ.