ಕಾರವಾರ: ಭ್ರಷ್ಟತೆಯನ್ನು ಮೈಗೂಡಿಸಿಕೊಂಡಿರುವ ಕಾಂಗ್ರೆಸ್ ಸರ್ಕಾರ ಬಡವರ ರಕ್ತ ಹೀರಿ ಬಿಪಿಎಲ್ ಕಾರ್ಡ್‌ನ್ನು ರದ್ದುಗೊಳಿಸುತ್ತಿದೆ. ಸಾರ್ವಜನಿಕರ ಆಸ್ತಿಯನ್ನು ನುಂಗುವ ಪರಿಸ್ಥಿತಿ ಬಂದಿರುವುದು ಕಾಂಗ್ರೆಸ್ ಸರ್ಕಾರ ಯಾವ ರೀತಿ ರಸ್ತೆ ಬೀದಿಗಿಳಿದಿದೆ ಎನ್ನುವುದನ್ನು ಗಮನಿಸಬೇಕು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಮಾಜಿ ಶಾಸಕಿ ರೂಪಾಲಿ ನಾಯ್ಕ ಹೇಳಿದರು.
ರೈತರ ಭೂಮಿಯನ್ನು ಕಸಿದು ವಕ್ಫ್ ಬೋರ್ಡ್ ಹೆಸರಿಗೆ ನೋಂದಾಯಿಸುತ್ತಿರುವುದಾಗಿ ಆರೋಪಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಜಿಲ್ಲಾ ಬಿಜೆಪಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಅಭಿವೃದ್ಧಿ ಕಾರ್ಯಗಳತ್ತ ಗಮನಹರಿಸುವ ಬದಲು ಹಗರಣದ ಮೇಲೆ ಹಗರಣಗಳನ್ನು ಮಾಡಿ ಭ್ರಷ್ಟಾಚಾರ ಮಾಡುತ್ತಿದೆ. ಅವರ ಈ ಹುನ್ನಾರವು ಅವರದ್ದೇ ಮತ ಬ್ಯಾಂಕ್ ಆಗಿರುವ ಅಲ್ಪಸಂಖ್ಯಾತರನ್ನೂ ಕೂಡ ಬಿಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಮಾತನಾಡಿ, ರೈತರ ವಿರೋಧಿಯಾಗಿರುವ ಕಾಂಗ್ರೆಸ್ ಸರ್ಕಾರ, ಅಧಿಕಾರಕ್ಕೆ ಬಂದಾಗಿನಿಂದ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದೆ. ಇದೀಗ ವಕ್ಫ್ ಬೋರ್ಡ್ ಹಗರಣ ಬೆಳಕಿಗೆ ಬಂದಿದ್ದು, ಸರಕಾರದ ಈ ನಡೆಯನ್ನು ಬಿಜೆಪಿಯು ಖಂಡಿಸುತ್ತದೆ ಎಂದರು.
ರಾಜ್ಯ ಮಾಧ್ಯಮ ವಕ್ತಾರ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಇತ್ತೀಚೆಗೆ ಸಿಎಂ ಸಿದ್ಧರಾಮಯ್ಯ ಅವರು ವಕ್ಫ್ ಅಧಿಸೂಚನೆಯನ್ನು ವಾಪಸ್ ಪಡೆಯುತ್ತೇವೆ ಎಂದಿದ್ದರು. ಇದೀಗ ವಕ್ಫ್ ಹಗರಣ ಬೆಳಕಿಗೆ ಬರುತ್ತಿದ್ದಂತೆ ಹಕ್ಕುಪತ್ರಗಳನ್ನು ಪರಿಶೀಲಿಸಲು ನೆರವಾಗುವ ದಿಶಾಂಕ್ ಅಪ್ಲಿಕೇಶನ್ ಕಾರ್ಯ ನಿರ್ವಹಿಸದೇ ಸ್ಥಗಿತಗೊಂಡಿದೆ. ವಕ್ಫ್ ಬೋರ್ಡ್ ತನ್ನ ನಿಲುವನ್ನು ಕಾಂಗ್ರೆಸ್ ಪಕ್ಷದ ಮೂಲಕ ಸಾಧಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಅಲ್ಪ ಸಂಖ್ಯಾತ ಮಹಿಳೆಯರಿಗೆ ಮಾರಕವಾಗಿದ್ದ ತ್ರಿವಳಿ ತಲಾಕನ್ನು ಕೇಂದ್ರದ ಬಿಜೆಪಿ ಸರ್ಕಾರ ನಿಷೇಧಿಸಿದೆ. ಆದರೆ ಕಾಂಗ್ರೇಸಿನ ಲ್ಯಾಂಡ್ ಜಿಹಾದ್ ತ್ರಿವಳಿ ತಲಾಕ್‌ಗಿಂತ ಅಪಾಯಕಾರಿ ಎಂದರು.
ವಕ್ಫ್ ಹಗರಣದ ಬಗ್ಗೆ ಸರಕಾರವು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಚಳಿಗಾಲದ ಅಧಿವೇಶನದ ವೇಳೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಪ್ರತಿಭಟನಾಕಾರರು ಉಪ ವಿಭಾಗಾಧಿಕಾರಿ ಕನಿಷ್ಕ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.