ಹೊನ್ನಾವರ: ಕಿರ್ಗಿಸ್ತಾನ್‌ನ ಬಿಶ್ಕೆಕ್‌ನಲ್ಲಿ ನಡೆದ 2ನೇ ಏಷ್ಯನ್ ಚೆಸ್ ಚಾಂಪಿಯನ್‌ಶಿಪ್ 2024 ವಿಕಲಾಂಗ ವಿಭಾಗದಲ್ಲಿ ಹೊನ್ನಾವರದ ಸಮರ್ಥ ಜಗದೀಶ ರಾವ್ ಅವರು ಬೆಳ್ಳಿ ಪದಕ ಗಳಿಸಿದ್ದಾರೆ. ಸಮರ್ಥ ಅವರು ಈವರೆಗೆ ಅಂತರರಾಷ್ಟ್ರೀಯ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ 1 ಚಿನ್ನ, 3 ಬೆಳ್ಳಿ, 3 ಕಂಚಿನ ಪದಕಗಳನ್ನು ಗಳಿಸಿದ್ದಾರೆ. ಇವರು ಮೈಸೂರಿನ ಅಜಿತ್.ಎಂ.ಪಿ ಅವರಿಂದ ತರಬೇತಿ ಪಡೆದಿದ್ದರು.
ಚೆಸ್ ಫೆಡರೇಶನ್ ಫಾರ್ ಫಿಸಿಕಲಿ ಡಿಸೇಬಲ್ಡ್ ಇಂಡಿಯಾದ ಇತಿಹಾಸದಲ್ಲಿ ಇದು ಐತಿಹಾಸಿಕ ಸಂಗತಿಯಾಗಿದೆ. ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾದ ಹಣಕಾಸು ನೆರವು ಮತ್ತು ಆಲ್ ಇಂಡಿಯಾ ಚೆಸ್ ಫೆಡರೇಶನ್ ಮತ್ತು ಪಿ.ಸಿ.ಐ.ನ ಸಹಕಾರದೊಂದಿಗೆ 8 ವಿಕಲಾಂಗ ಚೆಸ್ ಆಟಗಾರರು, 8 ಸಹಾಯಕರು, ತರಬೇತುದಾರರು, ತಂಡದ ವ್ಯವಸ್ಥಾಪಕರು ಮತ್ತು ಹೆಡ್ ಆಫ್ ಡೆಲಿಗೇಟ್ಸ್ ಅವರನ್ನು ಈ ಬಾರಿ 2ನೇ ಏಷ್ಯನ್ ಚೆಸ್ ಚಾಂಪಿಯನ್‌ಶಿಪ್ 2024ಗೆ ಕಳುಹಿಸಲಾಗಿತ್ತು.
ಭಾರತೀಯ ಆಟಗಾರರಾದ, ವಿಜಯವಾಡದ ವೆಂಕಟ ಕೃಷ್ಣ ಕಾರ್ತಿಕ್ ಚಿನ್ನ, ಕರ್ನಾಟಕದ ಸಮರ್ಥ ಜೆ ರಾವ್ ಬೆಳ್ಳಿ, ಜ್ಯೂನಿಯರ್ ವಿಭಾಗದಲ್ಲಿ ಗುಜರಾತ್‌ನ ಜಿನಾಯ್ ಅಂಕಿತ್‌ಭಾಯ್ ಶಾಹ್ ಬೆಳ್ಳಿ, ಮಹಾರಾಷ್ಟ್ರದ ಆದಿತ್ಯ ಅಸಾರಾಂ ಘುಲೆ ಕಂಚು, ಬಾಲಕಿಯರ ವಿಭಾಗದಲ್ಲಿ ತಮಿಳುನಾಡಿನ ಶೆರಾನ್ ರೇಚೆಲ್ ಅಬಿ ಚಿನ್ನ, ದುರ್ಕಾಸ್ರಿ ಮಾರುತಯ್ಯ ಬೆಳ್ಳಿ, ಮಹಿಳಾ ವಿಭಾಗದಲ್ಲಿ ಕರ್ನಾಟಕದ ಎಜಿಲರಸಿ ಗೋಪಾಲಕೃಷ್ಣ ಅತ್ಯುತ್ತಮ ಆನ್‌ರೇಟೆಡ್ ಆಟಗಾರ್ತಿ ಪ್ರಶಸ್ತಿ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.
ಸಿಎಫ್‌ಪಿಡಿ ಇಂಡಿಯಾ ಕಾರ್ಯದರ್ಶಿ ಆನಂದ ಬಾಬು, ಮತ್ತು ಇತರ ಅಧಿಕಾರಿಗಳ ಅವಿರತ ಪ್ರಯತ್ನದಿಂದ ಸಾಧಕರು ಸಾಧನೆ ಮಾಡುವಂತಾಗಿದ್ದು, ಚೆಸ್ ಫೆಡರೇಶನ್ ಫಾರ್ ಫಿಸಿಕಲಿ ಡಿಸೇಬಲ್ಡ್ ಇಂಡಿಯಾ ಎಲ್ಲಾ ಆಟಗಾರರು, ಸಹಾಯಕರು, ತಂಡ ವ್ಯವಸ್ಥಾಪಕರು, ಹೆಡ್ ಆಫ್ ಡೆಲಿಗೇಟ್ಸ್ ಮತ್ತು ತರಬೇತುದಾರರನ್ನು ಅಭಿನಂದಿಸಿದೆ.