ಕಾರವಾರ: ಕಾರು ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಹಿಂದೆ ಕುಳಿತಿದ್ದ ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಉತ್ತರಕನ್ನಡ ಜಿಲ್ಲೆಯ ಹೊನ್ನಾವರದ ರಾಷ್ಟ್ರೀಯ ಹೆದ್ದಾರಿ 66ರ ಶರಾವತಿ ಸೇತುವೆ ಮೇಲೆ ನಡೆದಿದೆ. ತಾಲ್ಲೂಕಿನ ಹಳದೀಪುರ ಮೂಲದ ಪೂಜಾ ಗೌಡ ಮೃತ ದುರ್ದೈವಿ ಯುವತಿಯಾಗಿದ್ದಾಳೆ.
ಕಾರು ಕಾಸರಕೋಡು ಭಾಗದಿಂದ ಹೊನ್ನಾವರದತ್ತ ಆಗಮಿಸುತ್ತಿದ್ದು, ಹೊನ್ನಾವರದಿಂದ ತೆರಳುತ್ತಿದ್ದ ಬೈಕ್ ಸವಾರ ಓವರ್ ಟೇಕ್ ಮಾಡುವ ಭರದಲ್ಲಿ ಎದುರಿನಿಂದ ಬರುತ್ತಿದ್ದ ಕಾರಿಗೆ ಮುಖಾಮುಖಿ ಡಿಕ್ಕಿ ಹೊಡೆದಿದ್ದಾನೆ. ಅಪಘಾತದ ತೀವ್ರತೆಗೆ ಬೈಕ್ ಚಲಾಯಿಸುತ್ತಿದ್ದ ಯುವಕ ಸುರೇಶ ಗೌಡ ತಲೆಗೆ ಗಂಭೀರ ಗಾಯಗಳಾಗಿದ್ದು, ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಬೈಕ್ ಹಾಗೂ ಕಾರಿನ ಮುಂಭಾಗ ಜಖಂ ಆಗಿದ್ದು, ಯುವಕನನ್ನು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಯುವತಿ ಮೃತದೇಹವನ್ನು ತಾಲ್ಲೂಕಾಸ್ಪತ್ರೆ ಶವಾಗಾರಕ್ಕೆ ಸ್ಥಳಾಂತರಿಸಲಾಗಿದ್ದು, ಅಪಘಾತದಿಂದಾಗಿ ಹೆದ್ದಾರಿ ಸೇತುವೆಯಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಸ್ಥಳಕ್ಕೆ ಹೊನ್ನಾವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.