ದಾಂತೇವಾಡ: ಛತ್ತೀಸ್‌ಗಢದ ದಾಂತೇವಾಡ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಒಂದು ವಿಚಿತ್ರ ಘಟನೆಯಲ್ಲಿ, ಮನೆಯ ಬಾವಿಯೊಂದರಲ್ಲಿ ನೀರಿನ ಬದಲು ಪೆಟ್ರೋಲ್ ಸಿಗಲು ಪ್ರಾರಂಭವಾಗಿತ್ತು. ಈ ಸುದ್ದಿಯು ಕಾಡ್ಗಿಚ್ಚಿನಂತೆ ಹರಡಿದ್ದು, ಜನರು ಪೆಟ್ರೋಲ್ ಸಂಗ್ರಹಿಸಲು ಬಕೆಟ್‌ಗಳೊಂದಿಗೆ ಬಾವಿಯತ್ತ ಮುಗಿಬಿದ್ದಿದ್ದರು. ಈ ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ನಡೆಸಿದ್ದು ಈ ವೇಳೆ ಪೆಟ್ರೋಲ್ ಬಾವಿಯ ಅಸಲಿ ಕಾರಣವನ್ನು ಪತ್ತೆಹಚ್ಚಿದ್ದಾರೆ.
ಭೋಲೆ ಜೈನ್ ಎಂಬುವವರ ಕುಟುಂಬ ವಾಸಿಸುವ ಗೀದಮ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಬೆಳಿಗ್ಗೆ ಮನೆಯವರು ಬಾವಿಯಿಂದ ನೀರು ಎಳೆಯಲು ಬಕೆಟ್ ಇಳಿಸಿದಾಗ ಅವರಿಗೆ ನೀರಿನಲ್ಲಿ ವಿಚಿತ್ರ ವಾಸನೆ ಕಂಡುಬಂದಿತ್ತು. ಬಳಿಕ ಬಕೆಟ್‌ನಲ್ಲಿ ಬಂದಿದ್ದು ನೀರಲ್ಲ, ಪೆಟ್ರೋಲ್ ಎಂದು ಅವರಿಗೆ ಗೊತ್ತಾಗಿತ್ತು. ಈ ಸುದ್ದಿ ಸುತ್ತಮುತ್ತಲಿನ ಪ್ರದೇಶದಲ್ಲಿ ಕಾಡ್ಗಿಚ್ಚಿನಂತೆ ಹರಡಿದ್ದು, ಉಚಿತ ಪೆಟ್ರೋಲ್ ಅನ್ನು ತುಂಬಿಕೊಳ್ಳಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಾವಿಯ ಬಳಿ ಜಮಾಯಿಸಿದರು. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಕೂಡಾ ವೈರಲ್ ಆಗಿತ್ತು.
ಸ್ಥಳಕ್ಕೆ ಧಾವಿಸಿದ ಪೊಲೀಸರು ತಕ್ಷಣ ಸ್ಥಳ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಸೀಲ್ ಮಾಡಿ ತನಿಖೆ ಆರಂಭಿಸಿದರು. ಪ್ರಾರಂಭದಲ್ಲಿ, ಹಳೆಯ ಬಸ್ ನಿಲ್ದಾಣದ ಬಳಿ ಇರುವ ಬಫ್ನಾ ಪೆಟ್ರೋಲ್ ಪಂಪ್‌ನ ಮಾಲೀಕರ ಪೆಟ್ರೋಲ್ ಕಳ್ಳತನದ ದೂರಿಗೆ ಈ ಘಟನೆ ಸಂಬಂಧಿಸಿರಬಹುದು ಎಂದು ಶಂಕಿಸಿದ್ದರು. ಪಂಪ್ ಮಾಲೀಕರು ದಿನವೂ ಪೆಟ್ರೋಲ್ ಕಳ್ಳತನವಾಗುತ್ತಿದೆ ಎಂದು ದೂರು ನೀಡಿದ್ದರು. ಆದರೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಯಾವುದೇ ಸಾಕ್ಷಿ ಸಿಕ್ಕಿಲ್ಲ.
ಪೊಲೀಸರು ಬಾವಿಯಿಂದ ಪೆಟ್ರೋಲ್ ಹರಿಯಲು ಕಾರಣವನ್ನು ಪತ್ತೆಹಚ್ಚಲು ಹೆಚ್ಚಿನ ತನಿಖೆ ನಡೆಸಿದಾಗ ನಿಜವಾದ ಕಾರಣ ಗೊತ್ತಾಯಿತು. ಆ ಮನೆಯಿಂದ ಕೇವಲ 100 ಮೀಟರ್ ದೂರದಲ್ಲಿರುವ ಪೆಟ್ರೋಲ್ ಪಂಪ್‌ನ ಪೆಟ್ರೋಲ್ ಟ್ಯಾಂಕ್ ಸೋರುತ್ತಿದ್ದ ಕಾರಣ ಪೆಟ್ರೋಲ್ ನೆಲಕ್ಕೆ ಹರಿದು ಬಾವಿಯಲ್ಲಿಗೆ ತಲುಪಿತ್ತು. ಸ್ಥಳದ ಸುರಕ್ಷತೆಯನ್ನು ಖಚಿತಪಡಿಸಲು ಪೊಲೀಸರು ಆ ಪ್ರದೇಶವನ್ನು ಸುತ್ತುವರೆದು, ಅಗ್ನಿಶಾಮಕ ದಳದ ಸಹಾಯದಿಂದ ಪೆಟ್ರೋಲ್ ಟ್ಯಾಂಕ್ ಅನ್ನು ಸರಿಪಡಿಸುವ ಕಾರ್ಯಾಚರಣೆ ನಡೆಸಿದರು.