ಬೆಳಗಾವಿ: ಚಿನ್ನದ ವ್ಯಾಪಾರಿಗಳು ತೆರಳುತ್ತಿದ್ದ ಕಾರನ್ನು ಸಿನಿಮೀಯ ರೀತಿಯಲ್ಲಿ ಅಡ್ಡಗಟ್ಟಿ 75 ಲಕ್ಷ ರೂಪಾಯಿ ದರೋಡೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹರಗಾಪುರ ಗ್ರಾಮದ ಬಳಿ ನಡೆದಿದೆ. ಸೂರಜ್ ವನಮಾನೆ ಎಂಬುವವರೇ ದರೋಡೆಗೆ ಒಳಗಾದ ಚಿನ್ನದ ವ್ಯಾಪಾರಿಯಾಗಿದ್ದಾರೆ.
ಸೂರಜ್ ಮಹಾರಾಷ್ಟ್ರದ ಕೊಲ್ಲಾಪುರದಿಂದ ಚಿನ್ನದ ವ್ಯಾಪಾರ ಮುಗಿಸಿ ಹಣದ ಜೊತೆಗೆ ಕೇರಳಕ್ಕೆ ಹೊರಟ್ಟಿದ್ದರು. ಈ ವೇಳೆ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸೂರಜ್ ಕಾರನ್ನು ದರೋಡೆಕೋರರು ಹಿಂಬಾಲಿಸಿಕೊಂಡು ಬಂದಿದ್ದಾರೆ. ಹರಗಾಪುರ ಗ್ರಾಮದ ಬಳಿ ಸಿನಿಮೀಯ ಶೈಲಿಯಲ್ಲಿ ಏಕಾಏಕಿ ವ್ಯಾಪಾರಿಯ ಇನ್ನೋವಾ ಕಾರನ್ನು ಅಡ್ಡಗಟ್ಟಿದ್ದಾರೆ.
ಪಿಸ್ತೂಲು ಹಿಡಿದು ಕಾರನ್ನು ಸುತ್ತುವರೆದ ದರೋಡೆಕೋರರು ವ್ಯಾಪಾರಿ ಸೂರಜ್ ಬಳಿಯಿದ್ದ 75 ಲಕ್ಷ ಹಣವನ್ನು ಕಸಿದುಕೊಂಡಿದ್ದು, ಅವರ ಕಾರು ಚಾಲಕ ಮತ್ತು ಚಿನ್ನದ ವ್ಯಾಪಾರಿಯನ್ನು ಕೆಳಗಿಳಿಸಿ ಕಾರಿನ ಸಹಿತ ಪರಾರಿಯಾಗಿದ್ದಾರೆ. ಈ ಸಂಬಂಧ ಚಿನ್ನದ ವ್ಯಾಪಾರಿ ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.