ಹಾಸನ: ಶುಚಿಯಾದ ಸಮವಸ್ತ್ರ ಧರಿಸಿ, ಗಡ್ಡ ಟ್ರಿಂ ಮಾಡಿ ಎಂದು ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರು ನೀಡಿದ ಸೂಚನೆ ವಿವಾದ ಸೃಷ್ಟಿಸಿದೆ.
ಹಾಸನ ಜಿಲ್ಲೆ ಹೊಳೆನರಸೀಪುರದ ಚಿಟ್ಟನಹಳ್ಳಿ ಬಡಾವಣೆಯ ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಜಮ್ಮು-ಕಾಶ್ಮೀರದ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣ ಎಕ್ಸ್ (ಟ್ವಿಟರ್)ನಲ್ಲಿ ‘ಮುಸ್ಲಿಂ ವಿದ್ಯಾರ್ಥಿಗಳಿಗೆ ಗಡ್ಡ ತೆಗೆಯಲು ಪ್ರಾಂಶುಪಾಲರು ಸೂಚಿಸಿದ್ದಾರೆ’ ಎಂದು ಟ್ವೀಟ್ ಮಾಡಿದ್ದು, ವಿವಾದ ಸೃಷ್ಟಿಸಿದೆ. ಸ್ಪಷ್ಟನೆ ನೀಡಿರುವ ಪ್ರಾಂಶುಪಾಲರು ಯಾರಿಗೂ ಗಡ್ಡ ಬೋಳಿಸಲು ಹೇಳಿಲ್ಲ. ಶುಭ್ರವಾಗಿರಲು ಹೇಳಿದ್ದೇನೆ ಅಷ್ಟೇ ಎಂದಿದ್ದಾರೆ.
ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ ಪ್ರಧಾನ ಮಂತ್ರಿ ವಿಶೇಷ ಸ್ಕಾಲರ್ ಶಿಪ್ ಯೋಜನೆ ಅಡಿಯಲ್ಲಿ ಈ ವರ್ಷ ಬಂದಿರುವ 7 ವಿದ್ಯಾರ್ಥಿಗಳೂ ಸೇರಿ ಜಮ್ಮು-ಕಾಶ್ಮೀರದ ಒಟ್ಟು 14 ವಿದ್ಯಾಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕೆಲವರು ಕ್ಲಿನಿಕಲ್ ಲ್ಯಾಬ್‌ಗೆ ಶುಚಿತ್ವ ಇಲ್ಲದೆ, ಶೂ ಧರಿಸದೆ, ಗಡ್ಡ ಟ್ರಿಂ ಮಾಡದೇ ಬರುತ್ತಿದ್ದರು. ಹೀಗಾಗಿ, ಪ್ರಾಂಶುಪಾಲರು, ಶುಚಿಯಾಗಿ, ಗಡ್ಡ ಟ್ರಿಂ ಮಾಡಿ ಬರುವಂತೆ ಸೂಚಿಸಿದ್ದರು. ಸೆಪ್ಟಂಬರ್ 4ರಂದು ಹೊಳೆನರಸೀಪುರ ಸರ್ಕಾರಿ ಆಸ್ಪತ್ರೆಯ ಕ್ಲಿನಿಕಲ್ ಲ್ಯಾಬಿಗೆ ಶುಚಿಯಾಗಿ, ಶೂ ಧರಿಸಿ ಬಾರದ 18 ವಿದ್ಯಾರ್ಥಿಗಳನ್ನು ಕ್ಲಿನಿಕಲ್ ಲ್ಯಾಬ್‌ನ ಮಾರ್ಗದರ್ಶಕರು ಲ್ಯಾಬ್‌ಗೆ ಸೇರಿಸಿರಲಿಲ್ಲ. ಕೆಲವರು ಈ ವಿಷಯವನ್ನು ಮುಚ್ಚಿಟ್ಟು ಮುಸ್ಲಿಂ ಯುವಕರಿಗೆ ಗಡ್ಡ ಬೋಳಿಸಲು ಹೇಳಿದರು ಎಂದು ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದಾರೆ.