ವಿಜಯಪುರ: ರಾಜ್ಯದಲ್ಲಿ ಕಾಂಗ್ರೆಸ್ ಶಾಸಕರು ಹತಾಶರಾಗಿದ್ದಾರೆ. ಶಾಸಕರಿಗೆ ಏನೂ ಸಿಗ್ತಿಲ್ಲ. ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಕಾಂಗ್ರೆಸ್ ಶೇ.90 ಸರ್ಕಾರ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮದು ಶೇ.40 ಅಂತಿದ್ರು. ಸುಮ್ಮನೆ ಆರೋಪ ಮಾಡಿದ್ರು. ಬಿಜೆಪಿ ಮೇಲೆ ಪೇ ಸಿಎಂ ಎಂದು ಆರೋಪ ಮಾಡಿದ್ರು. ಆದ್ರೆ ತನಿಖೆ ಏಕೆ ಮಾಡಲಿಲ್ಲ? ಯಾಕೆಂದರೆ ತನಿಖೆ ಮಾಡಿ ಪ್ರೂವ್ ಮಾಡೋಕು ಆಗಲಿಲ್ಲ ಎಂದರು.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪಿಎ ಹೆಸರು ಬರೆದಿಟ್ಟು ಬೆಳಗಾವಿಯ ತಹಶೀಲ್ದಾರ್ ಕಚೇರಿ ಎಸ್‌ಡಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಬಹಳಷ್ಟು ದೂರುಗಳಿದ್ದು, ಅವರು ಭ್ರಷ್ಟಾಚಾರದ ತುತ್ತ ತುದಿಯಲ್ಲಿದ್ದಾರೆ. ತಕ್ಷಣವೇ ಲಕ್ಷ್ಮೀ ಹೆಬ್ಬಾಳ್ಕರ್ ರಾಜೀನಾಮೆ ಕೊಡಬೇಕು. ಈ ಹಿಂದೆ ಮಾಡಿದ ಪಾಪದ ಫಲ ಅವರಿಗೆ ಕಾಡುತ್ತಿದೆ. ಈಶ್ವರಪ್ಪ ರಾಜೀನಾಮೆ ಕೊಡುವಂತೆ ಮಾಡಿದ ಪಾಪದ ಕೊಡ ತುಂಬಿ ಬೆನ್ನು ಹತ್ತಿದೆ. ಬೆಳಗಾವಿಯಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಐದಾರು ಸಾವಿರ ರೂಪಾಯಿ ಕೆಲಸಕ್ಕೂ ಲಂಚ ಕೊಡಬೇಕಿದೆ. ಪಿಎ ಹೆಸರು ಬರೆದಿರೋದಕ್ಕೆ ಲಕ್ಷ್ಮಿ ಹೆಬ್ಬಾಳ್ಕರ್ ಹೊಣೆ, ಮಂತ್ರಿಗಳು ಕಲೆಕ್ಟ್ ಮಾಡೋದೆ ಪಿಎಗಳಿಂದ. ಹಾಗಾಗಿ ಲಕ್ಷ್ಮಿ ಹೆಬ್ಬಾಳ್ಕರ್ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಸಚಿವ ತಿಮ್ಮಾಪುರ ವರ್ಗಾವಣೆ ಭ್ರಷ್ಟಾಚಾರ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಸರ್ಕಾರದ ಎಲ್ಲ ಇಲಾಖೆಗಳಲ್ಲಿ ಭ್ರಷ್ಟಾಚಾರ ನಡೆದಿದೆ. ಸಚಿವರಿಗೆ ಮತ್ತೊಂದು ಸೋರ್ಸ್ ಇಲ್ಲ. ಪಂಚ ಗ್ಯಾರಂಟಿಯಿಂದ ಸಚಿವರಿಗೆ ಎಲ್ಲಿ ಹಣ ತಿನ್ನಬೇಕು ಎಂಬುದು ತಿಳಿಯುತ್ತಿಲ್ಲ. ಎಕ್ಸೈಜ್ (ಅಬಕಾರಿ) ವರ್ಗಾವಣೆಯಲ್ಲಿ ದೊಡ್ಡ ಉದ್ಯೋಗ ಹುಟ್ಟಿಕೊಂಡಿದೆ. ಕಾರಣ ಯಾರಿಗೂ ಗ್ಯಾರಂಟಿ ಇಲ್ಲ. ಗ್ಯಾರಂಟಿ ಕೊಟ್ಟ ಮೇಲೆ ಸರ್ಕಾರದ್ದೆ ಗ್ಯಾರಂಟಿ ಇಲ್ಲ. ಸಿಎಂಗೆ ಎಷ್ಟು ದಿನ ಮುಂದುವರೆಯುತ್ತೇನೆ ಎನ್ನುವ ಗ್ಯಾರಂಟಿ ಇಲ್ಲ. ಎಲ್ಲರೂ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.
ಬೆಂಗಳೂರಲ್ಲಿ ಜಾಗಗಳ ಎನ್‌ಎ (ಕೃಷಿಯೇತರ ಭೂಮಿ) ಮಾಡಲು ಭ್ರಷ್ಟಾಚಾರ ನಡೆದಿದೆ. ಬೆಂಗಳೂರಲ್ಲಿ ಎನ್‌ಎ ಮಾಡಲು ಡಿಕೆಶಿಗೆ ಹಣ ಕೊಡಬೇಕು. ಸ್ಕ್ವೇರ್ ಫೀಟ್ ಗೆ 75 ರಿಂದ 100 ರು. ಕೊಡಬೇಕು. ಡಿಕೆಶಿ ಕ್ಯಾಲ್ಕುಲೇಟರ್ ತೆಗೆದುಕೊಂಡು ಕೂತಿರ್ತಾನೆ ಎಂದು ಶಾಸಕ ಯತ್ನಾಳ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಮೇಲೆ ಗಂಭೀರ ಆರೋಪ ಮಾಡಿದರು.