ಗುಜರಾತ್: ಸತತ 3 ಗಂಟೆಗಳ ಕಾಲ ನಿಲ್ಲಿಸಿ ವೈದ್ಯಕೀಯ ವಿದ್ಯಾರ್ಥಿಯೊಬ್ಬನನ್ನು ಮಾನಸಿಕ ಹಾಗೂ ದೈಹಿಕವಾಗಿ ರ್‍ಯಾಗಿಂಗ್‌ಗೆ ಒಳಪಡಿಸಲಾಗಿದ್ದು, ಆತ ಕುಸಿದು ಸಾವನ್ನಪ್ಪಿರುವ ಘಟನೆ ಗುಜರಾತ್‌ನ ಪಾಟನ್‌ನಲ್ಲಿ ನಡೆದಿದೆ. ಈ ಸಂಬಂಧ 15 ಹಿರಿಯ ವಿದ್ಯಾರ್ಥಿಗಳ ವಿರುದ್ಧ ಎಫ್ಐಆರ್ ದಾಖಲಿಸಿ ಅವರನ್ನು ಕಾಲೇಜಿಂದ ಹೊರದಬ್ಬಲಾಗಿದೆ.
ಮೊದಲ ವರ್ಷದ 11 ವಿದ್ಯಾರ್ಥಿಗಳನ್ನು ಪರಿಚಯ ಮಾಡಿಕೊಳ್ಳುವ ನೆಪದಲ್ಲಿ ಅವರನ್ನೆಲ್ಲಾ 3ನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳು 3 ತಾಸು ನಿಲ್ಲಿಸಿಕೊಂಡಿದ್ದರು. ಆಗ ಅನಿಲ್ ಮೆಥಾನಿಯಾ (18) ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾನೆ.
ಪ್ರಜ್ಞಾಹೀನನಾದ ಅವನನ್ನು ಆಸ್ಪತ್ರೆಗೆ ಸೇರಿಸಲಾಯಿತು. ಬಳಿಕ ಪ್ರಜ್ಞೆ ಬಂದಾಗ ಆತನ ಹೇಳಿಕೆ ಪಡೆದುಕೊಳ್ಳಲಾಯಿತು. ಈ ವೇಳೆ ಆತ ರ್‍ಯಾಗಿಂಗ್ ಬಗ್ಗೆ ಬಾಯಿಬಿಟ್ಟ. ಆದರೆ ನಂತರ ಚಿಕಿತ್ಸೆ ಫಲಿಸದೇ ಆತ ಸಾವನ್ನಪ್ಪಿದ ಎನ್ನಲಾಗಿದೆ.
ಇದಕ್ಕೆ ಅನಿಲ್‌ನ ಸಂಬಂಧಿ ಪ್ರತಿಕ್ರಿಯಿಸಿ, ‘ಅನಿಲ್‌ನನ್ನು ಆಸ್ಪತ್ರೆಗೆ ಸೇರಿಸುವ ವಿಷಯ ಕಾಲೇಜಿನವರಿಂದ ತಿಳಿಯುತ್ತಿದ್ದಂತೆ ನಾವಲ್ಲಿಗೆ ತಲುಪಿದೆವು. ಹಿರಿಯ ವಿದ್ಯಾರ್ಥಿಗಳಿಂದ ರ್‍ಯಾಗಿಂಗ್ ನಡೆದಿರುವುದು ತಿಳಿಯಿತು. ನಮಗೆ ನ್ಯಾಯ ಬೇಕು’ ಎಂದು ಆಗ್ರಹಿಸಿದ್ದಾರೆ.
ಕಾಲೇಜಿನ ಡೀನ್ ಮಾತನಾಡಿ, ‘ತನ್ನನ್ನು 3 ತಾಸು ನಿಲ್ಲಿಸಿ ರ್‍ಯಾಗಿಂಗ್ ಮಾಡಿರುವ ಬಗ್ಗೆ ಅನಿಲ್ ಪೊಲೀಸರಿಗೆ ತಿಳಿಸಿದ್ದಾನೆ. ಈ ಸಂಬಂಧ ಕಠಿಣ ಕ್ರಮ ಕೈಗೊಳ್ಳಲು ಪ್ರಯತ್ನಿಸುತ್ತೇವೆ’ ಎಂದರು.
‘ಮಗನ ಸಾವಿನ ಕುರಿತು ಅನಿಲ್‌ನ ತಂದೆ ದೂರು ನೀಡಿದ್ದು, ಆಕಸ್ಮಿಕ ಸಾವಿನ ಪ್ರಕರಣ ದಾಖಲಾಗಿದೆ. ಶವವನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ರ್‍ಯಾಗಿಂಗ್ ಬಗ್ಗೆ ಮಾಹಿತಿ ನೀಡಿವಂತೆ ಕಾಲೇಜಿನವರಿಗೂ ಸೂಚಿಸಿದ್ದೇವೆ’ ಎಂದು ಹಿರಿಯ ಪೊಲೀಸ್ ಅಧಿಕಾರಿ ಕೆ.ಕೆ. ಪಾಂಡ್ಯ ಹೇಳಿದ್ದಾರೆ.