ಬೆಂಗಳೂರು: ಮಾಜಿ ಸಚಿವರೊಬ್ಬರಿಗೆ ವಾಟ್ಸಾಪ್ ಮೂಲಕ ವೀಡಿಯೋ ಕಾಲ್ ಮಾಡಿ ಹಣಕ್ಕೆ ಬ್ಲಾಕ್‌ಮೇಲ್ ಮಾಡುತ್ತಿದ್ದ ನಲಪಾಡ್ ಬ್ರಿಗೇಡ್‌ನ ಅಧ್ಯಕ್ಷೆ ಮಂಜುಳಾ ಪಾಟೀಲ್ ಹಾಗೂ ಆಕೆಯ ಪತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ನಲಪಾಡ್ ಬ್ರಿಗೇಡ್‌ನ ಕಲಬುರಗಿ ಘಟಕದ ಅಧ್ಯಕ್ಷೆಯಾಗಿದ್ದ ಈಕೆ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಅವರಿಗೆ ವಾಟ್ಸಾಪ್‌ನಲ್ಲಿ ವೀಡಿಯೋ ಕಾಲ್ ಮಾಡಿ ಅವುಗಳನ್ನು ರೆಕಾರ್ಡ್ ಮಾಡಿಕೊಂಡು ವೈರಲ್ ಮಾಡೋದಾಗಿ ಬೆದರಿಸಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಳು.
ಮಹಮ್ಮದ್ ನಲಪಾಡ್ ಬ್ರಿಗೇಡ್‌ನ ಅಧ್ಯಕ್ಷೆಯಾಗಿದ್ದ ಮಂಜುಳಾ ಪಾಟೀಲ್ ಹಲವು ವರ್ಷಗಳಿಂದ ಕಾಂಗ್ರೆಸ್‌ನಲ್ಲಿ ಸಕ್ರಿಯವಾಗಿದ್ದರಿಂದ ಮಾಲೀಕಯ್ಯ ಅವರಿಗೆ ಈಕೆಯ ಪರಿಚಯವಾಗಿತ್ತು. ಮೊಬೈಲ್‌ನಲ್ಲಿ ಇಬ್ಬರೂ ಸಲುಗೆಯಿಂದ ಮಾತನಾಡುವುದನ್ನು ಬೆಳೆಸಿಕೊಂಡಿದ್ದು, ಇದನ್ನೇ ಬಳಸಿಕೊಂಡು ಮಂಜುಳಾ ವೀಡಿಯೋ ಕರೆಗಳನ್ನು ಮಾಡಿ ಅವುಗಳನ್ನು ರೆಕಾರ್ಡ್ ಮಾಡಿಕೊಂಡಿದ್ದಳು. 20 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಮಂಜುಳಾ ಪಾಟೀಲ್, ಹಣ ನೀಡದಿದ್ದಲ್ಲಿ ಈ ಆಡಿಯೋ-ವೀಡಿಯೋಗಳನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸೋದಾಗಿ ಬೆದರಿಕೆ ಒಡ್ಡಿದ್ದಳು.
ಮಂಜುಳಾ ಪಾಟೀಲ್ ಹನಿಟ್ರ್ಯಾಪ್ ದಂಧೆಗೆ ಆಕೆಯ ಪತಿ ಶಿವರಾಜ ಪಾಟೀಲ್ ಸಹ ಸಾಥ್ ನೀಡಿದ್ದು, ಇಬ್ಬರೂ ಡೀಲ್ ಕುರಿತು ಮಾತನಾಡಲು ಮಾಲೀಕಯ್ಯ ಪುತ್ರ ರಿತೇಶ್ ಭೇಟಿಯಾಗಲು ಬೆಂಗಳೂರಿಗೆ ಬಂದಿದ್ದರು. ಈ ವೇಳೆ ರಿತೇಶ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರ ದೂರಿನನ್ವಯ ಮಂಜುಳಾ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಇವರ ಈ ಹನಿಟ್ರ್ಯಾಪ್ ಖೆಡ್ಡಾಕ್ಕೆ ಮಾಜಿ ಸಚಿವರು ಸೇರಿದಂತೆ ಹಲವು ಗಣ್ಯರು ಸಹ ಬಿದ್ದಿರುವ ಕುರಿತು ಆಕೆಯ ಮೊಬೈಲ್‌ನಲ್ಲಿ ಸಾಕ್ಷ್ಯ ಪತ್ತೆಯಾಗಿದೆ ಎನ್ನಲಾಗಿದೆ.
ಮಂಜುಳಾ ಬ್ಯಾಗ್‌ನಲ್ಲಿ 6 ಸ್ಮಾರ್ಟ್ ಪೋನ್‌ಗಳು ಪತ್ತೆಯಾಗಿದ್ದು ಈ ಮೊಬೈಲ್‌ಗಳಲ್ಲಿ ಸುಮಾರು 8 ಮಂದಿಯ ಖಾಸಗಿ ವೀಡಿಯೋಗಳು ಸಿಸಿಬಿ ಪೊಲೀಸರ ಪರಿಶೀಲನೆ ವೇಳೆ ಪತ್ತೆಯಾಗಿವೆ. ಜನಪ್ರತಿನಿಧಿಗಳು ಮಾತ್ರವಲ್ಲದೇ ಪೊಲೀಸ್ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳ ಖಾಸಗಿ ವೀಡಿಯೋಗಳು ಸಹ ಪತ್ತೆಯಾಗಿವೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 8 ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಲಾಗಿದೆ.