ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷಕ್ಕೆ ಏನಾದರೂ ಒಳ್ಳೇದು ಆಗಬೇಕೆಂದರೆ ರಾಹುಲ್ ಗಾಂಧಿ ಬದಲು ಒಬ್ಬ ಒಳ್ಳೇ ಲೀಡರ್ ಅನ್ನು ಹುಡುಕಿಕೊಳ್ಳಲಿ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮದವರ ಜತೆ ಮಾತನಾಡುತ್ತಾ, ಒಬ್ಬ ಬುದ್ಧಿಹೀನ ನಾಯಕನ ಕಾರಣ ಕಾಂಗ್ರೆಸ್ ಪಕ್ಷ ಬೌದ್ಧಿಕ ದಿವಾಳಿ ಆಗಿದ್ದು, ಇನ್ನೂ ಅಧೋಗತಿಗೆ ಹೋಗುತ್ತದೆ ಎಂದು ಭವಿಷ್ಯ ನುಡಿದರು.
ಒಬ್ಬ ಸಕ್ರಿಯ ವಿರೋಧ ಪಕ್ಷದ ನಾಯಕರು ಇರಬೇಕು ಎಂಬುದು ನಮ್ಮ ಆಶಯವಾಗಿದೆ. ಹಾಗಾಗಿ ಕಾಂಗ್ರೆಸ್ ಪಕ್ಷದವರು ಒಬ್ಬ ಒಳ್ಳೇ ಲೀಡರ್ ಅನ್ನು ಆಯ್ಕೆ ಮಾಡಿಕೊಳ್ಳಲಿ ಎಂದು ಜೋಶಿ ಸಲಹೆ ನೀಡಿದರು.
*200 ದಾಟಿಲ್ಲ ಕಾಂಗ್ರೆಸ್:* ಕಾಂಗ್ರೆಸ್ ಪಕ್ಷ 40 ವರ್ಷದ ಬಳಿಕ ಲೋಕಸಭೆಯಲ್ಲಿ 200 ಸೀಟ್ ದಾಟಿಲ್ಲ. ಅಷ್ಟರ ಮಟ್ಟಿಗೆ ದೇಶದಲ್ಲಿ ಕಾಂಗ್ರೆಸ್ ಕ್ಷೀಣಿಸುತ್ತಾ ಬಂದಿದೆ ಎಂದು ಹೇಳಿದರು.
ಭಾರತದ ಪ್ರಜಾಪ್ರಭುತ್ವದ ಮೇಲೆ ಜಗತ್ತಿಗೆ ಅಪನಂಬಿಕೆ ಹುಟ್ಟಿಸಲು ಕಾಂಗ್ರೆಸ್ ನಾಯಕರು ಪ್ರಯತ್ನ ಮಾಡುತ್ತಿದ್ದಾರೆ. ಹಾಗಾಗಿ ಇವಿಎಂ ದೋಷ ಎನ್ನುತ್ತಿದ್ದಾರೆ ಎಂದು ಆರೋಪಿಸಿದರು.
ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದುಪಡಿಸಿದ್ದಕ್ಕೆ ಅಂದು ಪಾಕಿಸ್ತಾನ ಕರಾಳ ದಿನ ಎಂದಿತು. ರಾಹುಲ್ ಗಾಂಧಿ ಸಹ ಬ್ಲ್ಯಾಕ್ ಡೇ ಎಂದರೆಂದು ಟೀಕಿಸಿದರು.
ಕೋವ್ಯಾಕ್ಸಿನ್, ನಮ್ಮ ಲಸಿಕೆ ಬಗ್ಗೆ ತಪ್ಪು ಮಾಹಿತಿ ಕೊಟ್ಟರು. ಇದು ಪ್ರಜಾಪ್ರಭುತ್ವವನ್ನು ಒಂದು ರೀತಿ ಅಸ್ಥಿರಗೊಳಿಸುವ ಕೆಲಸ ಮಾಡಿತು. ಈಗಲೂ ಸದನಕ್ಕೆ ಅಡ್ಡಿ ಪಡಿಸುತ್ತಿದ್ದಾರೆ ಎಂದು ದೂರಿದರು.