ಧಾರವಾಡ: ರಾಜ್ಯಾದ್ಯಂತ ಸದ್ದು ಮಾಡುತ್ತಿರುವ ವಕ್ಫ್ ಆಸ್ತಿ ವಿವಾದದ ಬಿಸಿ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿಗೂ ತಟ್ಟಿದೆ. ಇಲ್ಲಿನ 43 ರೈತರ ಹೊಲಗಳ ಪಹಣಿಯಲ್ಲಿ ವಕ್ಫ್ ಆಸ್ತಿ ನಮೂದಾಗಿರುವುದು ರೈತರಲ್ಲಿ ಆತಂಕವನ್ನುಂಟು ಮಾಡಿದೆ. ರೈತರು ಹೋರಾಟಕ್ಕೆ ಅಣಿಯಾಗುತ್ತಿದ್ದಾರೆ. ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿಯಲ್ಲಿನ ರೈತರೊಬ್ಬರ ಜಮೀನಿನ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿರುವ ಬೆನ್ನಲ್ಲೇ ಇದೀಗ ನವಲಗುಂದದಲ್ಲೂ ಇದೇ ರೀತಿ ಆಗಿರುವುದು ಬೆಳಕಿಗೆ ಬಂದಿದೆ.
2018-19ರಲ್ಲೇ ವಕ್ಫ್ ಬೋರ್ಡ್ ಹೊರಡಿಸಿರುವ ನೋಟಿಫಿಕೇಶನ್ ಅದರಂತೆ ಕೆಲವೊಂದಿಷ್ಟು ರೈತರ ಹೊಲಗಳ ಪಹಣಿಯಲ್ಲಿನ 11ನೆಯ ಕಾಲಂನಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿದೆ. ಆದರೆ ರೈತರಿಗೆ ಯಾವುದೇ ಬಗೆಯ ನೋಟಿಸ್ ಈ ವರೆಗೂ ಬಂದಿಲ್ಲ. ಪಹಣಿಯಲ್ಲಿ ಮಾತ್ರ ವಕ್ಫ್ ಆಸ್ತಿ ಎಂದು ನಮೂದಾಗಿದೆ.
ಇದಕ್ಕಾಗಿ ಕಚೇರಿ ಅಲೆದು ರೈತರು ಸುಸ್ತಾಗಿದ್ದಾರೆ. ನಮ್ಮ ಹೊಲಗಳಲ್ಲಿ ಅದ್ಹೇಗೆ ವಕ್ಫ್ ಆಸ್ತಿ ಎಂದು ನಮೂದಾಯಿತು ಎಂಬುದೇ ಗೊತ್ತಿಲ್ಲ. ನಮದು ಪಿತ್ರಾರ್ಜಿತ ಆಸ್ತಿ. ಈಗ ನೋಡಿದರೆ ವಕ್ಫ್ ಆಸ್ತಿ ಎಂದಾಗಿದೆ. ಕೂಡಲೇ ಅಧಿಕಾರಿಗಳು ಇದನ್ನು ಸರಿಪಡಿಸಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.
ಈ ಕುರಿತಂತೆ ತಹಸೀಲ್ದಾರ್ ಸುಧೀರ ಸಾವಕಾರ ಮಾತನಾಡಿ, ತಾಲೂಕಿನಲ್ಲಿ 43 ರೈತರ ಹೊಲಗಳ ಪಹಣಿಯಲ್ಲಿ ವಕ್ಫ್ ಆಸ್ತಿಯೆಂದು ನಮೂದಾಗಿದೆ. ದಾಖಲೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಈ ಸಂಬಂಧ ರೈತರು ತಮಗೆ ಮನವಿ ಸಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ.