ನವದೆಹಲಿ: ಲೋಕಸಭೆ ಚುನಾವಣೆ ವೇಳೆ ಕ್ಷೇತ್ರದಲ್ಲಿ ಪ್ರಭಾವ ಬೀರಲು ಅಕ್ರಮ ಹಣ ಹಂಚಿದ್ದಾರೆ ಹಾಗೂ ಚುನಾವಣಾ ಖರ್ಚಿನ ನಿಜವಾದ ಖರ್ಚನ್ನು ಬಹಿರಂಗಪಡಿಸದೇ ಅಕ್ರಮ ಎಸಗಿದ್ದಾರೆ ಎಂದು ಬಳ್ಳಾರಿ ಕಾಂಗ್ರೆಸ್ ಸಂಸದ ಇ. ತುಕಾರಾಂ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ ಹಾಗೂ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಕೋರಿದ್ದಾರೆ.
ಇದೇ ವೇಳೆ, ವಿಧಾನಸಭೆ ಚುನಾವಣೆ ನೀತಿಸಂಹಿತೆ ಜಾರಿಯಲ್ಲಿ ಇರುವಾಗಲೇ ಪುಟಗಟ್ಟಲೆ ಸರ್ಕಾರಿ ಜಾಹೀರಾತು ನೀಡಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರವು ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದೆ. ಈ ಜಾಹೀರಾತುಗಳು ಸುಳ್ಳಿನಿಂದ ಕೂಡಿವೆ. ಇದು ಮತದಾರರ ಮೇಲೆ ಪ್ರಭಾವ ಬೀರುವ ತಂತ್ರ. ಹೀಗಾಗಿ ಈ ಬಗ್ಗೆಯೂ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಿಜಯೇಂದ್ರ ನೇತೃತ್ವದ ನಿಯೋಗವು ಆಯೋಗಕ್ಕೆ ಆಗ್ರಹಿಸಿದೆ.
ದೂರು ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ‘ಮತ ಸೆಳೆಯುವ ಸಲುವಾಗಿ ಲೋಕಸಭೆ ಚುನಾವಣೆ ವೇಳೆ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ 187 ಕೋಟಿ ರು. ಹಣವನ್ನು ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಬಳಸಲಾಗಿದೆ. ಜಾರಿ ನಿರ್ದೇಶನಾಲಯವೇ ಇದನ್ನು ತನಿಖೆ ಬಳಿಕ ಬಹಿರಂಗಪಡಿಸಿದೆ. ಆದ್ದರಿಂದ ಆ ಕ್ಷೇತ್ರದಲ್ಲಿ ಗೆದ್ದಿದ್ದ ತುಕಾರಾಂರನ್ನು ಅನರ್ಹಗೊಳಿಸಲು ಆಗ್ರಹಿಸಲಾಗಿದೆ’ ಎಂದರು.
ಅಲ್ಲದೆ, ‘ಚುನಾವಣೆ ವೇಳೆಯೇ ರಾಜ್ಯ ಸರ್ಕಾರ ಇಡೀ ಪುಟದ ವರ್ಣಮಯ ಜಾಹೀರಾತು ನೀಡಿದ್ದು ಕೂಡ ನೀತಿ ಸಂಹಿತೆ ಉಲ್ಲಂಘನೆ. ಈ ಬಗ್ಗೆಯೂ ಕ್ರಮಕ್ಕೆ ಕೋರಲಾಗಿದೆ’ ಎಂದರು.