ಕಾರವಾರ: ದಲಿತಪರ ಎಂದು ಹೇಳಿಕೊಳ್ಳುವ, ದಲಿತ ನಾಯಕ ಸಿದ್ಧರಾಮಯ್ಯ ಅವರು ದಲಿತರ ಅಭಿವೃದ್ಧಿಗೆ ಇಟ್ಟ ಹಣವನ್ನು ದುರುಪಯೋಗ ಪಡಿಸಿಕೊಂಡು ಅನ್ಯಾಯ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯ ವಕ್ತಾರ ವೆಂಕಟೇಶ ದೊಡ್ಡೇರಿ ಆರೋಪಿಸಿದರು.
ಕಾರವಾರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಗ್ಯಾರೆಂಟಿ ಹೆಸರಿನಲ್ಲಿ 14,480 ಕೋಟಿ ಎಸ್ಸಿಪಿ, ಟಿಎಸ್ಪಿ ಹಣವನ್ನು ಬಳಕೆ ಮಾಡಿಕೊಂಡು, 60 ಸಾವಿರ ಕೋಟಿ ಗ್ಯಾರೆಂಟಿಗಾಗಿ ಹಣ ಇರಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ. ಆದರೆ ಅಲ್ಪಸಂಖ್ಯಾಂತರಿಗಾಗಿ ಮೀಸಲಿಟ್ಟ 3 ಸಾವಿರ ಕೋಟಿ ಹಣದಲ್ಲಿ ಒಂದು ರೂಪಾಯಿಯನ್ನೂ ಬಳಕೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಇನ್ನು ಎಸ್ಸಿಪಿ, ಟಿಎಸ್ಪಿ ಹಣವನ್ನು ಶಕ್ತಿ ಯೋಜನೆಗೆ ಬಳಕೆ ಮಾಡಿಕೊಂಡಿದ್ದಾಗಿ ತೋರಿಸಿದ್ದಾರೆ. ಬಸ್ಸುಗಳಲ್ಲಿ ಪ್ರಯಾಣಿಸುವಾಗ ಕಂಡಕ್ಟರ್ ಟಿಕೆಟ್ ಪಡೆಯುವವರ ಜಾತಿ ಕೇಳಿ ಟಿಕೆಟ್ ಕೊಡುತ್ತಾರೆಯೇ? ಎಂದು ಪ್ರಶ್ನಿಸಿದ್ದು, ದಲಿತರಿಗೆ ಇಟ್ಟ ಹಣವನ್ನು ಎಷ್ಟು ಬಳಕೆ ಮಾಡಿದ್ದೀರೆಂದು ಶ್ವೇತಪತ್ರ ಹೊರಡಿಸುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಆಗ್ರಹಿಸಿದರು.
ಮಾಜಿ ಶಾಸಕಿ, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಮಾತನಾಡಿ, ಅಹಿಂದ ಹೆಸರಿನಲ್ಲಿ ಬಂದ ಸಿಎಂ ಸಿದ್ಧರಾಮಯ್ಯ ಅವರು, ದಲಿತರನ್ನ ಕಡೆಗಣಿಸಿ, ದಲಿತರಿಗೆ ಮೀಸಲಿಟ್ಟ ಹಣವನ್ನು ಗ್ಯಾರೆಂಟಿ ಕೊಡುವ ನಿಟ್ಟಿನಲ್ಲಿ ದುರ್ಬಳಕೆ ಮಾಡಿದ್ದಾರೆ. ದಲಿತ ಸಮುದಾಯದ ವಿದ್ಯಾರ್ಥಿಗಳು ಮುಂದೆ ಬರಬೇಕು, ಅವರ ಶಿಕ್ಷಣಕ್ಕೆ ಅನುಕೂಲವಾಗಲಿ ಎಂದು ಮೀಸಲಿಟ್ಟ ಹಣವನ್ನು ಕಾಂಗ್ರೆಸ್ ಸರ್ಕಾರ ನುಂಗಿ, ರಾಜ್ಯಭಾರ ಮಾಡುತ್ತಿದೆ. ಮಕ್ಕಳಿಗೆ ಬರುತ್ತಿದ್ದ ಸ್ಕಾಲರ್ಶಿಪ್ ಹಣವನ್ನೂ ಸಹ ಕಡಿಮೆ ಮಾಡಿದ್ದು, ಕಾಂಗ್ರೆಸ್ ಸರ್ಕಾರ ಕನಿಷ್ಟ ಮಟ್ಟವನ್ನು ತಲುಪಿದೆ. ಜನರಿಗೆ ಮೋಸ ಮಾಡಿ ಅಧಿಕಾರ ನಡೆಸುತ್ತಿರುವುದನ್ನು ನಾವೆಲ್ಲರೂ ಖಂಡಿಸುತ್ತೇವೆ ಎಂದರು.
ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಮಾತನಾಡಿ, ದಲಿತಪರ ಎಂದು ಹೇಳಿಕೊಂಡು ಸಿಎಂ ಸಿದ್ಧರಾಮಯ್ಯ ದಲಿತರಿಗೇ ಮೋಸ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಬಜೆಟ್ ಘೋಷಣೆ ಮೊದಲು ಪರಿಶಿಷ್ಟರಿಗೆ ಮೀಸಲಿಟ್ಟ ಹಣವನ್ನು ವಾಪಸ್ ಇಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಿ, ದಲಿತರಿಗೆ ನ್ಯಾಯ ಒದಗಿಸುತ್ತೇವೆ ಎಂದರು.
ಬಿಜೆಪಿ ರಾಜ್ಯ ಮಾಧ್ಯಮ ವಕ್ತಾರ ಹರಿಪ್ರಕಾಶ ಕೋಣೆಮನೆ, ನಗರಸಭೆಯ ಅಧ್ಯಕ್ಷ ರವಿರಾಜ ಅಂಕೋಲೆಕರ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಎಸ್ ಹೆಗಡೆ, ಅಶೋಕ ಚಲವಾದಿ, ಎಲ್.ಟಿ.ಪಾಟೀಲ್, ಎಸ್ಸಿ ಮೋರ್ಚಾ ಅಧ್ಯಕ್ಷ ನಂದನ ಬೋರ್ಕರ್, ಒಬಿಸಿ ಮೋರ್ಚಾದ ರಾಜೇಂದ್ರ ನಾಯ್ಕ, ಮಂಜುನಾಥ ಮೀಸೆ, ಎಸ್ಟಿ ಮೋರ್ಚಾದ ರಾಜ್ಯ ಕಾರ್ಯದರ್ಶಿ ಸಂತೋಷ ತಳವಾರ, ವೀಣಾ ಸಿದ್ದಿ ಹಾಗೂ ಇತರ ಪದಾಧಿಕಾರಿಗಳು ಇದ್ದರು.