ಯಲ್ಲಾಪುರ: ಬಿಜೆಪಿ ನಾಯಕ ಮತ್ತು ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಯಲ್ಲಾಪುರದಲ್ಲಿ ನಡೆದ ಸಭೆಯಲ್ಲಿ ಸಿದ್ಧರಾಮಯ್ಯ ಸರ್ಕಾರದ ಮೇಲೆ ತೀವ್ರವಾಗಿ ವಾಗ್ದಾಳಿ ಮಾಡಿದ್ದಾರೆ. “ಪ್ರತಿಯೊಂದು ಹಗರಣದಲ್ಲಿ ಸರ್ಕಾರದ ಮಂತ್ರಿಗಳು ತೊಡಗಿಸಿಕೊಂಡಿದ್ದಾರೆ. ಇದು ಭ್ರಷ್ಟಾಚಾರದ ಸರ್ಕಾರ” ಎಂದು ಅವರು ಟೀಕಿಸಿದರು.
ನಳಿನ್ ಕುಮಾರ್ ಆರೋಪಿಸಿದ್ದು, “ವಾಲ್ಮೀಕಿ ಮತ್ತು ಮೂಡಾ ಹಗರಣದಲ್ಲಿ ಸರ್ಕಾರದ ಪಾತ್ರ ಸ್ಪಷ್ಟವಾಗಿದೆ. ಅಧಿಕಾರಿಗಳ ವರ್ಗಾವಣೆ ದುಂದುವೆಚ್ಗೆ ಉದಾಹರಣೆ. ಬಡವರು ಹಣಕೊಟ್ಟು ಆರ್ಟಿಸಿ ಪಡೆಯುವ ಪರಿಸ್ಥಿತಿ ಸೃಷ್ಟಿಯಾಗಿದೆ. ಕಾಂಗ್ರೆಸ್ ನೇತೃತ್ವದ ಸರ್ಕಾರದ ಪ್ರತಿ ಮನೆಯಲ್ಲಿ ಭ್ರಷ್ಟಾಚಾರ ತುಂಬಿದೆ” ಎಂದು.
“ಸಿದ್ಧರಾಮಯ್ಯ ಸರ್ಕಾರ ಹಿಂದೂ ಸಮಾಜವನ್ನು ಟಾರ್ಗೆಟ್ ಮಾಡುತ್ತಿದೆ. ಬೆಳಗಾವಿಯಲ್ಲಿ ಜೈನ ಮುನಿ ಹತ್ಯೆ, ಹಿಂದೂ ಕಾರ್ಯಕರ್ತರ ಮೇಲೆ ದಾಳಿಗಳು ನಡೆದಿವೆ” ಎಂದು ಅವರು ಖಂಡಿಸಿದರು. ದೇಶವಿರೋಧಿ ಘೋಷಣೆಗಳಿಗೆ ಕಾಂಗ್ರೆಸ್ ಸರ್ಕಾರ ಧೈರ್ಯ ನೀಡುತ್ತಿದೆ ಎಂದೂ ಆರೋಪಿಸಿದರು.
“ಕಳೆದ ಒಂದು ವರ್ಷದಲ್ಲಿ 1,000 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿದ್ಧರಾಮಯ್ಯ ರೈತರ ಕಣ್ಣೀರು ಒರೆಸಲು ಮನೆಗೆ ಹೋಗುವುದಿಲ್ಲ” ಎಂದು ನಳಿನ್ ಆರೋಪಿಸಿದರು. ಅಲ್ಪಸಂಖ್ಯಾತರಿಗೆ ವಿಶೇಷ ಸ್ಥಾನಮಾನ ನೀಡಿ ವಿಭಜನೆಯ ರಾಜಕಾರಣ ಮಾಡಲಾಗುತ್ತಿದೆ ಎಂದು ಟೀಕಿಸಿದರು.
“ಬಿಜೆಪಿ ಸರ್ಕಾರವಿದ್ದಾಗ ಯಲ್ಲಾಪುರಕ್ಕೆ 2,000 ಕೋಟಿ ರೂಪಾಯಿ ಅನುದಾನ ನೀಡಲಾಗಿತ್ತು. ಇಂದು ಶಾಸಕರಿಗೆ ಕೂಡ ಅನುದಾನ ಸಿಗುತ್ತಿಲ್ಲ” ಎಂದು ಹೇಳಿದ ನಳಿನ್, “ಸಿದ್ಧರಾಮಯ್ಯ ಮೋಸದಿಂದ ಸೋನಿಯಾ ಗಾಂಧಿಯವರ ಕಾಲು ಹಿಡಿದು ಮುಖ್ಯಮಂತ್ರಿಯಾದವರು. ಮಾನ ಮರ್ಯಾದೆ ಇದ್ದರೆ ರಾಜೀನಾಮೆ ನೀಡಿ ತೊಲಗಬೇಕು” ಎಂದು ಘೋಷಿಸಿದರು.
ಸರ್ಕಾರದ ನೀತಿಗಳ ವಿರುದ್ಧ ಜನಾಕ್ರೋಶವನ್ನು ಸೃಷ್ಟಿಸುವುದು ಈ ಯಾತ್ರೆಯ ಉದ್ದೇಶ ಎಂದು ನಳಿನ್ ತಿಳಿಸಿದರು. ಸಭೆಯಲ್ಲಿ ಬಿಜೆಪಿ ನಾಯಕರು ಮತ್ತು ಸ್ಥಳೀಯ ಪ್ರತಿನಿಧಿಗಳು ಹಾಜರಿದ್ದರು.