ಉಡುಪಿ: ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಬಗ್ಗೆ ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ಮಾಡಿರುವ ಟೀಕೆ ಸರಿಯಲ್ಲ, ಅವರು ತಕ್ಷಣ ಪೂಜ್ಯರ ಬಳಿ ಕ್ಷಮೆ ಕೇಳಲಿ ಎಂದು ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಆಗ್ರಹಿಸಿದ್ದಾರೆ.
ಸರ್ಕಾರ ಹಣ ಖರ್ಚು ಮಾಡಿ ಜಾತಿ ಜನಗಣತಿ ಮಾಡಿ ಮುಚ್ಚಿಟ್ಟಿದೆ. ಒಂದು ಕಡೆ ಜಾತಿ ಆಧಾರದಲ್ಲಿ ರಾಜಕೀಯ ಬೇಡ ಎನ್ನುತ್ತೀರಿ. ಇನ್ನೊಂದು ಕಡೆ ಜಾತಿ ಗಣತಿ ಎನ್ನುತ್ತೀರಿ, ಈ ಜಾತಿ ಗಣತಿ ಯಾಕೆ ಎನ್ನುವುದು ತಿಳಿಯುತ್ತಿಲ್ಲ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ನೀಡಿದ ಹೇಳಿಕೆ ಸಮಂಜಸವಾಗಿದೆ. ಆದರೆ ಬಿ.ಕೆ.ಹರಿಪ್ರಸಾದ್ ಅವರು ಪೇಜಾವರ ಸ್ವಾಮೀಜಿ ಅವರು ಕಾವಿ ಬಟ್ಟೆ ತ್ಯಜಿಸಿ ಬಂದರೆ ಅವರಿಗೆ ನಾವು ತಕ್ಕ ಉತ್ತರ ನೀಡುತ್ತೇವೆ ಎಂದು ಹೇಳಿರುವುದು ಖಂಡನೀಯ.
ಪೇಜಾವರ ಶ್ರೀಗಳು ಹೇಳಿರುವ ಮಾತು ಸರಿಯಾಗಿಯೇ ಇದೆ. ಎ.ಸಿ. ರೂಮಿನಲ್ಲಿ ಕುಳಿತು ಜಾತಿಗಣತಿಯ ವರದಿಯನ್ನು ಕಾಂಗ್ರೆಸ್ ಸರ್ಕಾರ ಸಿದ್ಧಪಡಿಸಿದೆ. ನಾವು ತಪ್ಪು ಮಾಡಿದಾಗ ತಿದ್ದಿ ಹೇಳುವ ಗುರುಗಳು, ಸಮಾಜವನ್ನು ಒಳ್ಳೆಯ ಮಾರ್ಗದಲ್ಲಿ ನಡೆಸಿಕೊಂಡು ಹೋಗುವ ಜವಾಬ್ದಾರಿಯನ್ನು ಪೇಜಾವರ ಶ್ರೀಗಳು ಮಾಡುತ್ತಿದ್ದಾರೆ. ಅಂತಹ ಪೂಜ್ಯರ ಬಗ್ಗೆ ಅವಹೇಳನವಾಗಿ ಮಾತನಾಡುವುದನ್ನು ಹಿಂದೂ ಸಮಾಜ ಎಂದಿಗೂ ಸಹಿಸುವುದಿಲ್ಲ ಎಂದು ಡಾ.ಧನಂಜಯ ಸರ್ಜಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.