ಕೋಲಾರ: ಯತ್ನಾಳ್ ಹಿಂದೂ ಹುಲಿಯಲ್ಲ, ಹಿಂದೂ ಇಲಿ ಎಂದು ಮಾಜಿ ಸಚಿವ ರೇಣುಕಾಚಾರ್ಯ ಬಸವಗೌಡ ಪಾಟೀಲ್ ಯತ್ನಾಳ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಇಲ್ಲಿನ ಕುರುಡುಮಲೆ ದೇಗುಲದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮಾಜಿ ಸಚಿವ ರೇಣುಕಾಚಾರ್ಯ ಬಿಜೆಪಿಗೆ ಹೊರಗಿನ ದುಷ್ಟಶಕ್ತಿ ಕಾಂಗ್ರೆಸ್ ಆಗಿದ್ರೆ, ಒಳಗಿನ ದುಷ್ಟಶಕ್ತಿ ಪಕ್ಷ ವಿರೋಧಿಗಳು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯತ್ನಾಳ್ ಅವರು ಕಾಂಗ್ರೆಸ್ ಮುಖವಾಣಿಯಂತೆ ಕೆಲಸ ಮಾಡುತ್ತಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿಯಿಂದ ಸುಪಾರಿ ಪಡೆದುಕೊಂಡಂತೆ ಪಕ್ಷದ ವಿರುದ್ಧವೇ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನು ರೇಣುಕಾಚಾರ್ಯ ಲಫೂಟ್ ಎಂಬ ಯತ್ನಾಳ್ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ನನ್ನ ಬಗ್ಗೆ ಹಗುರವಾಗಿ ಮಾತನಾಡಬೇಡ. ನೀನೊಬ್ಬ ಗೋಮುಖ ವ್ಯಾಘ್ರ, ನೀನು ಮುಖವಾಡ ಹಾಕಿಕೊಂಡಿದ್ದೀಯಾ. ನೀನು ಪಕ್ಷದಿಂದ ಸಸ್ಪೆಂಡ್ ಆಗಿದ್ದಾಗ ಇಪ್ತಿಯಾರ್ ಕೂಟ ಮಾಡಿದ್ದೆ. ಪಕ್ಷದಲ್ಲಿ ಸ್ವಯಂ ಘೋಷಿತ ಹಿಂದೂ ಹುಲಿ ಎಂದು ಹೇಳ್ತೀಯ, ನಿನಗೆ ಮಾನ ಮರ್ಯಾದೆ ಇದ್ರೆ ಸುಮ್ಮನಿರು ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.
ಇನ್ನು ಬಾಯಿ ಬಿಚ್ಚಿದ್ರೆ ಅಷ್ಟೇ, ನಾವೂ ನಾಟಿ, ನಾನು ಮಾತನಾಡ್ತೀನಿ ಎಂದು ರೇಣುಕಾಚಾರ್ಯ ಎಚ್ಚರಿಕೆ ನೀಡಿದ್ದಾರೆ.