ಶಿರಸಿ(ಉತ್ತರ ಕನ್ನಡ): ಶಿವಾಜಿ ಕೆಚ್ಚೆದೆಯ ಹೋರಾಟ ಪಠ್ಯಪುಸ್ತಕದಲ್ಲಿ ಇರಬೇಕೇ ವಿನಃ ಅಲೆಕ್ಸಾಂಡರ್ ಇತಿಹಾಸ ಬೇಡ. ಇತಿಹಾಸ ಅರ್ಥ ಮಾಡಿಕೊಳ್ಳದಿದ್ದರೆ ವರ್ತಮಾನದಲ್ಲಿ ಸ್ಪಷ್ಟ ಹೆಜ್ಜೆ ಇಡಲು ಸಾಧ್ಯವಿಲ್ಲ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.
ತಾಲೂಕಿನ ಸ್ವಾದಿ ಜೈನಮಠದಲ್ಲಿ ಭಾನುವಾರ ನಡೆದ ರಾಜ್ಯ ಮಟ್ಟದ ಇತಿಹಾಸ ಸಮ್ಮೇಳನದಲ್ಲಿ ಮಾತನಾಡಿ, ಇತಿಹಾಸ ಪುಟಗಳಲ್ಲಿ ನಮ್ಮ ಭಾಗವನ್ನು ಆಳಿದ ಮಹಾನ್ ರಾಜರ ಇತಿಹಾಸ ಸಿಗುತ್ತಿಲ್ಲ. ಮೋಘಲರು, ಬ್ರಿಟಿಷರು, ಪೋರ್ಚುಗೀಸರ ಆಡಳಿತವನ್ನು ಇತಿಹಾದಲ್ಲಿ ತುಂಬಿದ್ದಾರೆ. ನಮ್ಮ ದೇಶಕ್ಕೆ ದಂಡೆತ್ತಿ ಬಂದು ನಮ್ಮ ರಾಜರು, ಸಾಮ್ರಾಜ್ಯದ ಮೇಲೆ ದಾಳಿ ಮಾಡಿರುವ ವಿಷಯ ನಮಗೆ ಬೇಡ. ನಮ್ಮ ದೇಶದಲ್ಲಿ ಆಡಳಿತ ನಡೆಸಿದ ರಾಜಮನೆತನದ ಅಧ್ಯಯನ ಯುವಕರಿಗೆ ಅತ್ಯವಶ್ಯ ಎಂದು ಅಭಿಪ್ರಾಯಪಟ್ಟರು.
ನಮ್ಮ ರಾಜ ಮಹಾರಾಜರ ಆಡಳಿತದಲ್ಲಿದ್ದ ಕಾನೂನು, ಸಂಸ್ಕೃತಿ, ಆಚಾರ-ವಿಚಾರಗಳನ್ನು ಸ್ವಾತಂತ್ರ್ಯ ನಂತರ ಆಳಿದ ಸರ್ಕಾರಗಳು ಅಧ್ಯಯನದಲ್ಲಿ ಅಳವಡಿಸಿಲ್ಲ. ಬದಲಾಗಿ ಇತಿಹಾಸ ಧ್ವಂಸ ಮಾಡಿದವರ ಕುರಿತು ಸೇರಿಸಿದ್ದಾರೆ. ಈಗಲಾದರೂ ನಿಜವಾದ ಇತಿಹಾಸ ಅಧ್ಯಯನ ಮಾಡಬೇಕು ಎಂದು ಕರೆ ನೀಡಿದ್ದಾರೆ.