ಕಜಾನ್: ಭಾರತವು ಮಾತುಕತೆ ಮತ್ತು ರಾಜತಾಂತ್ರಿಕತೆಯನ್ನು ಬೆಂಬಲಿಸುತ್ತದೆಯೇ ಹೊರತು ಯುದ್ಧವನ್ನಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಇಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ತಿಳಿಸಿದರು. ಈ ಮೂಲಕ ರಷ್ಯಾ-ಉಕ್ರೇನ್ ನಡುವಿನ ಸಂಘರ್ಷವನ್ನು ಶಾಂತಿಯುತ ಮಾತುಕತೆಗಳ ಮೂಲಕ ಪರಿಹರಿಸಿಕೊಳ್ಳಬೇಕೆಂದು ಅವರು ತಮ್ಮ ಮಾತುಗಳ ಮೂಲಕ ಹೇಳಿದ್ದಾರೆ. ತಮ್ಮ ಭಾಷಣದಲ್ಲಿ, ಯುದ್ಧಗಳು, ಆರ್ಥಿಕ ಅನಿಶ್ಚಿತತೆ, ಹವಾಮಾನ ಬದಲಾವಣೆ ಮತ್ತು ಭಯೋತ್ಪಾದನೆಯಂತಹ ಒತ್ತಡದ ಸವಾಲುಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಜಗತ್ತನ್ನು ಸರಿಯಾದ ಹಾದಿಯಲ್ಲಿ ಕೊಂಡೊಯ್ಯಲು ಬ್ರಿಕ್ಸ್ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.
“ನಾವು ಮಾತುಕತೆ ಮತ್ತು ರಾಜತಾಂತ್ರಿಕತೆಯನ್ನು ಬೆಂಬಲಿಸುತ್ತೇವೆ, ಯುದ್ಧವಲ್ಲ. COVID ನಂತಹ ಸವಾಲನ್ನು ನಾವೆಲ್ಲ ಒಟ್ಟಾಗಿ ಜಯಿಸಲು ಸಾಧ್ಯವಾದಂತೆಯೇ, ಭವಿಷ್ಯದ ಪೀಳಿಗೆಗೆ ಸುರಕ್ಷಿತ, ಬಲವಾದ ಮತ್ತು ಸಮೃದ್ಧ ಭವಿಷ್ಯವನ್ನು ಖಚಿತಪಡಿಸಿಕೊಳ್ಳಲು ನಾವು ಖಂಡಿತವಾಗಿಯೂ ಹೊಸ ಅವಕಾಶಗಳನ್ನು ಸೃಷ್ಟಿಸಲು ಸಮರ್ಥರಾಗಿದ್ದೇವೆ” ಎಂದರು.
ಶೃಂಗಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಚೀನಾದ ಕ್ಸಿ ಜಿನ್‌ಪಿಂಗ್ ಸೇರಿದಂತೆ ಬ್ರಿಕ್ಸ್ ರಾಷ್ಟ್ರಗಳ ಉನ್ನತ ನಾಯಕರು ಭಾಗವಹಿಸಿದ್ದರು. ಭಯೋತ್ಪಾದನೆಯನ್ನು ಎದುರಿಸಲು ಜಾಗತಿಕ ಪ್ರಯತ್ನಗಳ ಸಂಘಟಿತ ಪ್ರಯತ್ನಗಳ ಅವಶ್ಯಕತೆಯ ಕುರಿತು ಮಾತನಾಡಿದ ಪ್ರಧಾನಿ, ಭಯೋತ್ಪಾದನೆಯ ವಿರುದ್ಧ ಹೋರಾಡುವಲ್ಲಿ ಯಾವುದೇ ಇಬ್ಬಗೆ ನೀತಿ ಇರಬಾರದು. “ಭಯೋತ್ಪಾದನೆ ಮತ್ತು ಭಯೋತ್ಪಾದನೆಗೆ ಹಣಕಾಸು ಒದಗಿಸುವುದನ್ನು ಎದುರಿಸಲು, ನಮಗೆ ಎಲ್ಲರ ಏಕ-ಮನಸ್ಸಿನ, ದೃಢವಾದ ಬೆಂಬಲ ಬೇಕು. ಈ ಗಂಭೀರ ವಿಷಯದಲ್ಲಿ ಎರಡು ಬಗೆಯ ಮಾನದಂಡಗಳಿಗೆ ಅವಕಾಶವಿಲ್ಲ” ಎಂದರು.
“ನಮ್ಮ ದೇಶಗಳಲ್ಲಿ ಯುವಕರ ಆಮೂಲಾಗ್ರೀಕರಣವನ್ನು ತಡೆಯಲು ನಾವು ಸಕ್ರಿಯ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಯುಎನ್‌ನಲ್ಲಿ ದೀರ್ಘಕಾಲ ಬಾಕಿ ಉಳಿದಿರುವ ಅಂತಾರಾಷ್ಟ್ರೀಯ ಭಯೋತ್ಪಾದನೆ ಕುರಿತು ನಾವು ಒಟ್ಟಾಗಿ ಕೆಲಸ ಮಾಡಬೇಕು,” ಎಂದು ಅವರು ಹೇಳಿದರು. “ಅದೇ ರೀತಿಯಲ್ಲಿ, ಸೈಬರ್ ಭದ್ರತೆ ಮತ್ತು ಸುರಕ್ಷಿತ AI ತಂತ್ರಜ್ಞಾನಕ್ಕಾಗಿ ನಾವು ಜಾಗತಿಕ ನಿಯಮಗಳ ಮೇಲೆ ಕೆಲಸ ಮಾಡಬೇಕಾಗಿದೆ” ಎಂದರು. ಅಲ್ಲದೇ ಬ್ರಿಕ್ಸ್‌ಗೆ ಹೊಸ ದೇಶಗಳನ್ನು ಪಾಲುದಾರ ರಾಷ್ಟ್ರಗಳಾಗಿ ಸ್ವಾಗತಿಸಲು ಭಾರತ ಸಿದ್ಧವಾಗಿದೆ ಎಂದು ಮೋದಿ ಹೇಳಿದರು.