ಕಾರವಾರ: ಕೇವಲ ರಾಜಕೀಯ ಮಾಡಲು ಡಿನ್ನರ್ ಮೀಟಿಂಗ್ ಮಾಡಬೇಕಾಗಿಲ್ಲ ಎಂದು ಸಣ್ಣ ನೀರಾವರಿ ಸಚಿವ ಬೋಸರಾಜು ಪ್ರತಿಕ್ರಿಯೆ ನೀಡಿದ್ದಾರೆ. ಇತ್ತೀಚೆಗೆ ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ನಡೆದ ಭೋಜನಕೂಟ ತೀವ್ರ ಚರ್ಚೆಗೆ ಗ್ರಾಸವಾಗಿರುವ ಕುರಿತು ಉತ್ತರಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಮಾದ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ಬೇರೆ ಕಾರಣಕ್ಕೆ ಬೇರೆ ಬೇರೆ ಸ್ಥಳದಲ್ಲಿ ರಾಜಕೀಯ ಚರ್ಚೆ ಮಾಡಬಹುದು ಎಂದರು.
ರಾಜಕಾರಣಿಗಳು ಅಂದ ಮೇಲೆ ನಮ್ಮ ಮನೆಗಳಲ್ಲಿ ಬೆಳಗ್ಗೆ ಟೇಬಲ್ ಮೇಲೆ ಪ್ಲೇಟ್ ಓಪನ್ ಆಗಿಯೇ ಇರುತ್ತೆ. ಯಾರಾದರೂ ಪ್ರಮುಖರು ಬಂದ ಸಂದರ್ಭದಲ್ಲಿ ಸಹಜವಾಗಿ ಊಟ, ತಿಂಡಿಗೆ ಆಹ್ವಾನಿಸುತ್ತೇವೆ. ಅದರಂತೆ ಮೊನ್ನೆ ಸಭೆ ಮುಗಿದ ಬಳಿಕ ಸಮಯ ಇದ್ದ ಕಾರಣ ಸಚಿವರು ಅಲ್ಲಿದ್ದವರಿಗೆ ಬಂದು ಊಟ ಮಾಡಿ ಹೋಗುವಂತೆ ಹೇಳಿದ್ದರಿಂದ ಅಲ್ಲಿದ್ದ ಸಚಿವರು, ಶಾಸಕರು ಸಹ ಹೋಗಿದ್ದಾರೆ. ಅದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂದರು.
ಗೃಹಸಚಿವ ಡಾ. ಜಿ.ಪರಮೇಶ್ವರ ಅವರು ಇತ್ತೀಚೆಗೆ ನಡೆದ ದಲಿತರ ದೌರ್ಜನ್ಯ ಪ್ರಕರಣಗಳ ಕುರಿತು ಮಾತನಾಡುವ ಉದ್ದೇಶದಿಂದ ಸಭೆ ಕರೆದಿದ್ದರು. ಆದರೆ ಮಾಧ್ಯಮಗಳಲ್ಲಿ ಔತಣಕೂಟದ ಕುರಿತು ರಾಂಗ್ ಮೆಸೇಜ್ ಹೋದ ನಂತರ ಹೈಕಮಾಂಡ್ ಈಗ ಬೇಡ ಮುಂದೆ ಮಾಡಿ ಎಂದು ಸೂಚನೆ ನೀಡಿದೆ ಎಂದರು.
ಇಡೀ ದೇಶದಲ್ಲಿ ಕಾಂಗ್ರೆಸ್ ಪಾರ್ಟಿಯಲ್ಲಿ ಶಿಸ್ತು ಇದೆ. ಆದರೆ ವಿರೋಧ ಪಕ್ಷದಲ್ಲಿ ಶಿಸ್ತಿನ ವಿಷಯವೇ ಇಲ್ಲ. ಬಿಜೆಪಿಯಲ್ಲಿ ಮೂರು ಬಾಗಿಲಿದ್ದದ್ದು, ಆರು ಬಾಗಿಲಾಗಿ ಹರಿದಿದೆ ಎಂದು ವ್ಯಂಗ್ಯವಾಡಿದರು.
ಇನ್ನು ಕುಮಾರಸ್ವಾಮಿ ತಲೆ ಮೇಲೆ ಕೂರುತ್ತಾರೆ ಎಂದು ಬಿಜೆಪಿಯವರಿಗೆ ಹೆದರಿಕೆ ಆಗಿದೆ. ಹೀಗಾಗಿ ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಮಗ ನಿಖಿಲ್ ಕುಮಾರಸ್ವಾಮಿಯನ್ನು ಸೋಲಿಸಿದರು. ಬಿಜೆಪಿಗರೇ ಎಲ್ಲರ ಬಳಿ ಹೇಳಿ ನಿಖಿಲ್ ಕುಮಾರಸ್ವಾಮಿಯನ್ನು ಸೋಲಿಸಿದ್ದು. ಚನ್ನಪಟ್ಟಣದಲ್ಲಿ ನಮ್ಮ ಗೆಲುವಿಗೆ ಇದು ಸಹ ಸಹಕಾರಿಯಾಗಿದೆ. ಬಿಜೆಪಿಗರು ಸದನದ ವಾತಾವರಣ ಕಲುಷಿತ ಮಾಡುತ್ತಿದ್ದಾರೆ ಎಂದು ಸಚಿವ ಬೋಸರಾಜು ಹೇಳಿದರು.