ಬೆಂಗಳೂರು, ಮಾರ್ಚ್ 25 ರಾಜ್ಯದಲ್ಲಿ ಮುಸ್ಲಿಮರಿಗೆ ಶೇಕಡಾ ನಾಲ್ಕು ಮೀಸಲಾತಿ ಕಲ್ಪಿಸಲು ಸಂವಿಧಾನವನ್ನು ಬದಲಾಯಿಸುವ ಬಗ್ಗೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಹೇಳಿಕೆಯನ್ನು ಖಂಡಿಸಿ ಬಿಜೆಪಿ ಮಂಗಳವಾರ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರತಿಭಟನೆಗಳನ್ನು ನಡೆಸಿತು.
ಅವರ ಹೇಳಿಕೆಯನ್ನು ಖಂಡಿಸಿ, ಕರ್ನಾಟಕ ಸರ್ಕಾರವು “ತುಷ್ಟೀಕರಣ ರಾಜಕೀಯ” ಮಾಡುತ್ತಿದೆ ಎಂದು ಆರೋಪಿಸಿ ಮಂಡ್ಯ, ಚಿಕ್ಕಬಳ್ಳಾಪುರ, ಮೈಸೂರು, ಕಲಬುರಗಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಸದಸ್ಯರು ಇಂದು ಪ್ರತಿಭಟಿಸಿ ಡಿ.ಕೆ ಶಿವುಕುಮಾರ್ ಅವರ ಪ್ರತಿಕೃತಿಯನ್ನು ದಹಿಸಿ ಆಕ್ರೋಶ ಹೊರಹಾಕಿದ ಪ್ರತಿಭಟನಾಕಾರರು ಶಿವಕುಮಾರ್ ಅವರು ಕ್ಷಮೆಯಾಚನೆ ಮಾಡಬೇಕು ಮತ್ತು ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ರಾಜ್ಯಾದ್ಯಂತ ಜಿಲ್ಲಾ ಮಟ್ಟದಲ್ಲಿ ನಮ್ಮ ಎಲ್ಲಾ ಮಂಡಲಗಳಲ್ಲಿ ಪ್ರತಿಭಟನೆಯನ್ನು ನಡೆಸುತ್ತಿದ್ದೇವೆ. ನಮ್ಮ ಶಾಸಕರು, ಎಂಎಲ್‌ಸಿಗಳು, ಮಾಜಿ ಸಚಿವರು ಮತ್ತು ಆರ್ ಅಶೋಕ ಮತ್ತು ಬಿ ವೈ ವಿಜಯೇಂದ್ರ ಅವರಂತಹ ಹಿರಿಯ ಪಕ್ಷದ ನಾಯಕರು ಕೂಡ ಪ್ರತಿಭಟನೆಗಳಲ್ಲಿ ಪಾಲ್ಗೋಳ್ಳುತ್ತಿದ್ದಾರೆ” ಎಂದು ಬಿಜೆಪಿಯ ಹಿರಿಯ ಕಾರ್ಯಕಾರಿಯೊಬ್ಬರು ತಿಳಿಸಿದರು.
ಮೈಸೂರಿನ, ಅಶೋಕಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಅಂಬೇಡ್ಕರ್ ಪ್ರತಿಮೆಯ ಮುಂದೆ ಬಿಜೆಪಿ ಶಾಸಕ ಟಿ.ಎಸ್. ಶ್ರೀವತ್ಸ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ “ಜೈ ಭೀಮ್” ಘೋಷಣೆಗಳನ್ನು ಕೂಗುತ್ತಾ, ಪಕ್ಷದ ಕಾರ್ಯಕರ್ತರು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಶಿವಕುಮಾರ್ ಮತ್ತು ಕಾಂಗ್ರೆಸ್ ಪಕ್ಷವನ್ನು “ದಲಿತ ವಿರೋಧಿ” ಮತ್ತು “ಸಂವಿಧಾನ ವಿರೋಧಿ” ಎಂದು ಆರೋಪಿಸಿದರು.
ವಿರೋಧ ಪಕ್ಷ ಬಿಜೆಪಿಯ ತೀವ್ರ ಪ್ರತಿಭಟನೆಯ ನಡುವೆಯೂ, ಕರ್ನಾಟಕ ವಿಧಾನಸಭೆಯು ಶುಕ್ರವಾರ ಸಾರ್ವಜನಿಕ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಶೇಕಡಾ ನಾಲ್ಕು ಮೀಸಲಾತಿ ನೀಡುವ ಮಸೂದೆಯನ್ನು ಅಂಗೀಕರಿಸಲಾಯಿತು.