ಹಾವೇರಿ: ಜಿಲ್ಲೆಯ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಭರತ್ ಬೊಮ್ಮಾಯಿ ಗುರುವಾರ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದು, ₹ 16.17 ಕೋಟಿ ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ. ಇದರ ಜತೆಗೆ ತಂದೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ₹5.74 ಲಕ್ಷ ಸಾಲ ಪಡೆದಿರುವುದಾಗಿ ತಿಳಿಸಿದ್ದಾರೆ.
ಶಿಗ್ಗಾಂವಿ ಚುನಾವಣಾಧಿಕಾರಿಗೆ ನಾಮಪತ್ರದೊಂದಿಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಸ್ಥಿರಾಸ್ತಿ ಮತ್ತು ಚರಾಸ್ತಿಯನ್ನು ಘೋಷಿಸಿಕೊಂಡಿದ್ದಾರೆ. ಭರತ್ ₹ 2.03 ಲಕ್ಷ ನಗದು ಹಣ ಹೊಂದಿದ್ದಾರೆ. ವಿವಿಧ ಬ್ಯಾಂಕ್, ಹಣಕಾಸು ಸಂಸ್ಥೆಗಳಲ್ಲಿ ₹ 4.05 ಲಕ್ಷ ನಿಶ್ಚಿತ ಠೇವಣಿ, ಉಳಿತಾಯ ಖಾತೆಗಳಲ್ಲಿ ₹ 1.19 ಕೋಟಿ ಹೊಂದಿದ್ದಾರೆ. ಸಾರ್ವಜನಿಕ ಕಂಪನಿಗಳಲ್ಲಿ ₹ 1.74 ಲಕ್ಷ , ಖಾಸಗಿ ಕಂಪನಿಗಳಲ್ಲಿ ₹ 50 ಸಾವಿರ, ಪಾಲುದಾರಿಕೆಯಲ್ಲಿ ₹ 1.23 ಕೋಟಿ ರು. ಬಂಡವಾಳ ತೊಡಗಿಸಿದ್ದಾರೆ. ಗೋಲ್ಡ್ ಚಿಟ್ ಫಂಡ್‌ನಲ್ಲಿ ₹ 70 ಸಾವಿರ, ಮ್ಯೂಚುವಲ್ ಫಂಡ್‌ನಲ್ಲಿ ₹ 10.20 ಲಕ್ಷ ತೊಡಗಿಸಿದ್ದಾರೆ. ₹ 81.61 ಲಕ್ಷ ಮೌಲ್ಯದ ಚಿನ್ನಾಭರಣ ಹೊಂದಿರುವ ಇವರ ಬಳಿ ಯಾವುದೇ ವಾಹನವಿಲ್ಲ. ಇನ್ನಿತರ ಆದಾಯ, ಬಡ್ಡಿ ಸೇರಿದಂತೆ ಒಟ್ಟು ₹ 3.79 ಕೋಟಿ ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಇನ್ನು ಬೆಂಗಳೂರಿನ ಆರ್.ಟಿ.ನಗರದಲ್ಲಿ ಒಂದು ವಾಸದ ಮನೆ, ಬೆಂಗಳೂರಿನ ಸೆಂಚುರಿ ಎಥೋಸ್ ಅಪಾರ್ಟ್‌ಮೆಂಟ್‌ನಲ್ಲಿ ಪ್ಲಾಟ್ ಸೇರಿದಂತೆ ₹ 5.50 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ.
ಭರತ್ ಬೊಮ್ಮಾಯಿ ಅವರು ಗೃಹ ಸಾಲ, ವೈಯಕ್ತಿಕ ಸಾಲ ಸೇರಿದಂತೆ ಒಟ್ಟು ₹ 2.32 ಕೋಟಿ ಸಾಲ ಹೊಂದಿದ್ದಾರೆ. ತಂದೆ ಬಸವರಾಜ ಬೊಮ್ಮಾಯಿ ಅವರಿಂದ ₹5.74 ಲಕ್ಷ ಸಾಲ ಪಡೆದಿದ್ದಾರೆ. ಭರತ್ ಅವರ ಪತ್ನಿ ಇಬ್ಬನಿ ಅವರ ಹೆಸರಿನಲ್ಲಿ ಗೃಹ ಸಾಲ, ವಾಹನ ಸಾಲ ಸೇರಿದಂತೆ 1 ಕೋಟಿ ರು ಸಾಲವಿದೆ.
ಭರತ್ ಪತ್ನಿಯ ಆಸ್ತಿ:
ಪತ್ನಿ ಇಬ್ಬನಿ ಬಳಿ ₹ 1.43 ಲಕ್ಷ ನಗದು ಹಣ, ವಿವಿಧ ಬ್ಯಾಂಕುಗಳಲ್ಲಿ ನಿಶ್ಚಿತ ಠೇವಣಿ, ಉಳಿತಾಯ ಖಾತೆಗಳಲ್ಲಿ ₹ 56.32 ಲಕ್ಷ ಹೊಂದಿದ್ದಾರೆ. ವಿವಿಧ ಕಂಪನಿಗಳಲ್ಲಿ ₹ 33 75 ಲಕ್ಷ ಬಂಡವಾಳ ಹೂಡಿಕೆ ಮಾಡಿದ್ದು, ಪಾಲುದಾರಿಕೆ ವ್ಯವಹಾರದಲ್ಲಿ ₹ 31.12 ಲಕ್ಷ ತೊಡಗಿಸಿದ್ದಾರೆ. ಇವರ ಬಳಿ ಮಾರುತಿ ಸ್ವಿಫ್ಟ್ ಕಾರು ಇದ್ದು, ₹ 1.73 ಕೋಟಿ ಮೌಲ್ಯದ 2702 ಗ್ರಾಂ ಚಿನ್ನಾಭರಣ ಸೇರಿದಂತೆ ಒಟ್ಟು ₹ 3.64 ಕೋಟಿ ಮೌಲ್ಯದ ಸ್ಥಿರಾಸ್ತಿಯಿದೆ. ಬೆಂಗಳೂರಿನ ತಾವರೆಕೆರೆ ಹೋಬಳಿ ಅಜ್ಜನಹಳ್ಳಿ ಗ್ರಾಮದಲ್ಲಿ ಒಂದು ಸೈಟ್, ಕೆಂಗೇರಿಯಲ್ಲಿ ಕೆಎಚ್‌ಬಿ ನಿವೇಶನ ಹಾಗೂ ಸೆಂಚುರಿ ಎಥೋಸ್ ಅಪಾರ್ಟ್‌ಮೆಂಟ್‌ನಲ್ಲಿ ಪ್ಲಾಟ್ ಸೇರಿದಂತೆ ₹ 2.83 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಇವರ ಪುತ್ರನ ಬಳಿ ₹ 40.47 ಲಕ್ಷ ಮೌಲ್ಯದ ಚರಾಸ್ತಿಯಿದೆ. ಒಟ್ಟು ಭರತ್ ಬೊಮ್ಮಾಯಿ ಅವರು 16.17 ಕೋಟಿ ರು. ಮೌಲ್ಯದ ಆಸ್ತಿ ಹೊಂದಿದ್ದಾರೆ.
ಅಮೆರಿಕ, ಸಿಂಗಾಪುರದಲ್ಲಿ ಶಿಕ್ಷಣ:
ಭರತ್ ಬೊಮ್ಮಾಯಿ ಅವರು ಅಮೆರಿಕದ ಫರ್ಡ್ಯೂ ವಿಶ್ವ ವಿದ್ಯಾಲಯದಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‍ನಲ್ಲಿ ಪದವಿ, ಸಿಂಗಾಪುರದ ಮ್ಯಾನೇಜ್ಮೆಂಟ್ ವಿವಿಯಲ್ಲಿ ಮಾಸ್ಟರ್ ಆಫ್ ಸೈನ್ಸ್ ಇನ್ ಇನ್ನೋವೇಶನ್ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.