ಚೆನ್ನೈ: ಸಣ್ಣಪುಟ್ಟ ವಿಷಗಳಿಗೆ ಗ್ರಾಹಕರ ನ್ಯಾಯಾಲಯಗಳು ವ್ಯಾಪಾರಸ್ಥರಿಗೆ ಭಾರಿ ಪ್ರಮಾಣದ ದಂಡ ವಿಧಿಸಿರುವುದನ್ನು ಕೇಳಿದ್ದೀರಿ ಅಥವಾ ನೋಡಿದ್ದೀರಿ. ಆದರೆ, ಇಲ್ಲಿ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಅಂಚೆ ಕಚೇರಿ ಪೈಸೆ ಮೊತ್ತಕ್ಕಾಗಿ ಸಾವಿರಾರು ದಂಡ ಕಟ್ಟುವ ಸ್ಥಿತಿ ತಲುಪಿದೆ.
ಹೌದು, 50 ಪೈಸೆಯನ್ನು ಹಿಂದಿರುಗಿಸದ ಅಂಚೆ ಕಚೇರಿಗೆ ಇಲ್ಲಿನ ಜಿಲ್ಲಾ ಗ್ರಾಹಕರ ನ್ಯಾಯಾಲಯ 15000 ರು. ದಂಡ ವಿಧಿಸಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯ ಮಾನಶ್ ಎಂಬ ವ್ಯಕ್ತಿ 2023ರ ಡಿ.3 ರಂದು ತನ್ನ ರಿಜಿಸ್ಟರ್ ಪೋಸ್ಟನ್ನು ಕಳುಹಿಸಲು ಪೋಜಿಚಲೂರು ಎಂಬ ಅಂಚೆ ಕಚೇರಿಗೆ ಭೇಟಿ ನೀಡಿದ್ದ. ಅಂಚೆ ಶುಲ್ಕ 29.50 ರೂಪಾಯಿ ಆಗಿದ್ದರಿಂದ ಮಾನಶ್ 30 ರು. ಪಾವತಿಸಿದ್ದನು. ಅಂಚೆ ಕಚೇರಿ ಸಿಬ್ಬಂದಿ ತನ್ನ 50 ಪೈಸೆ ಹಿಂದಿರುಗಿಸಿರಲಿಲ್ಲ. ಈ ಹಿನ್ನೆಲೆ ಯುಪಿಐ ಮೂಲಕ ಹಣ ಪಾವತಿಸುವುದಾಗಿ ಹೇಳಿದ್ದರು. ಆದರೆ ತಾಂತ್ರಿಕ ಕಾರಣ ನೀಡಿ ಅದನ್ನು ಅಂಚೆ ಸಿಬ್ಬಂದಿ ತಿರಸ್ಕರಿಸಿದ್ದರು. ಬಳಿಕ 50 ಪೈಸೆಯನ್ನು ರೌಂಡಾಫ್ ಮಾಡಿಕೊಂಡಿದ್ದಾಗಿ ಅಂಚೆ ಸಿಬ್ಬಂದಿ ಹೇಳಿ ಕಳುಹಿಸಿದ್ದರು.
ಈ ಹಿನ್ನೆಲೆ ಮಾನಶ್ ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿದ್ದರು. ಹೀಗೆ ಪ್ರತಿ ಗ್ರಾಹಕರಿಂದ ದೇಶವ್ಯಾಪಿ ಹೀಗೆ ಹಣ ಸಂಗ್ರಹ ಮಾಡಿದರೆ ಅದು ದೊಡ್ಡ ಮೊತ್ತವಾಗುತ್ತದೆ ಎಂದು ವಾದಿಸಿದ್ದರು. ಈ ವಾದ ಒಪ್ಪಿದ ನ್ಯಾಯಾಲಯ, ಗ್ರಾಹಕಗೆ 15000 ರೂಪಾಯಿ ಪರಿಹಾರ ಅಂದರೆ 50 ಪೈಸೆಯ ಶೇ.2999,900 ರಷ್ಟು ಪರಿಹಾರ ನೀಡುವಂತೆ ಆದೇಶಿಸಿದೆ.