ಹೈದರಾಬಾದ್: ಮಹಿಳೆಯರನ್ನು ಬಳಸಿಕೊಂಡು, ಮದ್ಯಪಾನ ಮಾಡಿದ ಪುರುಷ ಗ್ರಾಹಕರಿಗೆ ದುಬಾರಿ ಬಿಲ್ ಹಾಕಿ ವಂಚಿಸುತ್ತಿದ್ದ ಆರೋಪದ ಮೇಲೆ ಬಂಜಾರಾ ಹಿಲ್ಸ್‌ನಲ್ಲಿರುವ ನಾಲ್ಕು ಪಬ್‌ಗಳ ಪರವಾನಗಿಯನ್ನು ಹೈದರಾಬಾದ್ ಪೊಲೀಸರು ಶನಿವಾರ ರದ್ದುಗೊಳಿಸಿದ್ದಾರೆ. ಇದೇ ರೀತಿಯ ಅವ್ಯವಹಾರ ನಡೆಸುತ್ತಿರುವ ಐದನೇ ಬಾರ್ ಅನ್ನು ಗುರುತಿಸಲಾಗಿದ್ದು, ಶೀಘ್ರದಲ್ಲೇ ಮುಚ್ಚಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಶುಕ್ರವಾರ ರಾತ್ರಿ ಬಂಜಾರಾ ಹಿಲ್ಸ್‌ನ ರಸ್ತೆ ಸಂಖ್ಯೆ 3ರಲ್ಲಿರುವ ‘ಟೇಲ್ಸ್ ಓವರ್ ದಿ ಸ್ಪಿರಿಟ್ (TOS)’ ಪಬ್ ಮೇಲೆ ದಾಳಿ ನಡೆಸಿದ ಬಳಿಕ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಪಬ್‌ನಲ್ಲಿ ಅಶ್ಲೀಲ ನೃತ್ಯ ಪ್ರದರ್ಶಿಸುತ್ತಿದ್ದ 40ಕ್ಕೂ ಹೆಚ್ಚು ಮಹಿಳೆಯರನ್ನು ಬಂಧಿಸಲಾಗಿದೆ. ಮತ್ತು ಅಶ್ಲೀಲ ನೃತ್ಯವನ್ನು ವೀಕ್ಷಿಸುತ್ತಿದ್ದ 100 ಮಂದಿ ಗ್ರಾಹಕರನ್ನು ಬಂಧಿಸಲಾಗಿದೆ. ಪೊಲೀಸರು ದಾಳಿ ನಡೆಸಿದ ವೇಳೆ ಕೆಲವು ಗ್ರಾಹಕರು ಅಶ್ಲೀಲ ನೃತ್ಯ ಪ್ರದರ್ಶಿಸುತ್ತಿದ್ದ ನರ್ತಕಿಯರ ಮೇಲೆ ಹಣದ ಸುರಿಮಳೆಗೈಯುತ್ತಿದ್ದರು.
ದಾಳಿ ವೇಳೆ TOS ಪಬ್‌ಗಳ ಮಾಲೀಕರಾದ ಶ್ರೀನಿವಾಸ್ ಗೌಡ ಮತ್ತು ಬಲರಾಮ ಗೌಡನನ್ನು ಪೊಲೀಸರು ಬಂಧಿಸಿದ್ದು, ಇವರ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಕಾಯ್ದೆಯ ಸೆಕ್ಷನ್ 290, 294, 188, 318, 120 ಬಿ ಅಡಿಯಲ್ಲಿ ಸಾರ್ವಜನಿಕ ಕಿರುಕುಳ, ಅಶ್ಲೀಲ ನೃತ್ಯ, ವ್ಯಕ್ತಿಗಳನ್ನು ವಂಚಿಸುವುದು ಮತ್ತು ಕ್ರಿಮಿನಲ್ ಪಿತೂರಿಯ ಪ್ರಕರಣಗಳನ್ನು ದಾಖಲಿಸಲಾಗಿದೆ.