ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಗಂದರ್‌ಬಾಲ್ ಜಿಲ್ಲೆಯ ಶ್ರೀನಗರ-ಲೇಹ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ರಾತ್ರಿ ಸುರಂಗ ನಿರ್ಮಾಣ ಪ್ರದೇಶದ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದು, ಓರ್ವ ವೈದ್ಯ ಮತ್ತು ಆರು ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಂದರ್‌ಬಾಲ್‌ನ ಗುಂಡ್‌ನಲ್ಲಿ ಸುರಂಗ ಯೋಜನೆಯಲ್ಲಿ ಕಾರ್ಮಿಕರು ಮತ್ತು ಇತರೆ ಸಿಬ್ಬಂದಿ ಕೆಲಸ ಮಾಡಿ ಕ್ಯಾಂಪ್‌ಗಳಿಗೆ ಮರಳಿದ ವೇಳೆ ಅಪರಿಚಿತ ಭಯೋತ್ಪಾದಕರು ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುಮಾರು ಇಬ್ಬರು ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾಗಿ ತಿಳಿದುಬಂದಿದ್ದು, ಸ್ಥಳೀಯರು ಹಾಗೂ ವಿವಿಧೆಡೆಗಳ ಕಾರ್ಮಿಕರು ಇದ್ದ ಗುಂಪಿನ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ಪರಿಣಾಮ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಓರ್ವ ವೈದ್ಯ ಹಾಗೂ ನಾಲ್ವರು ಕಾರ್ಮಿಕರು ನಂತರ ಕೊನೆಯುಸಿರೆಳೆದಿದ್ದಾರೆ.
ಮೃತರನ್ನು ಡಾ.ಶಹನವಾಜ್, ಫಹೀಮ್ ನಜೀರ್, ಕಲೀಂ, ಮೊಹಮ್ಮದ್ ಹನೀಫ್, ಶಶಿ ಅಬ್ರೋಲ್, ಅನಿಲ್ ಶುಕ್ಲಾ ಮತ್ತು ಗುರ್ಮೀತ್ ಸಿಂಗ್ ಎಂದು ಗುರುತಿಸಲಾಗಿದೆ. ಭಯೋತ್ಪಾದಕ ದಾಳಿಯಲ್ಲಿ ಐದು ಜನರು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭದ್ರತಾ ಪಡೆಗಳು ಗುಂಡಿನ ದಾಳಿ ನಡೆದ ಪ್ರದೇಶವನ್ನು ಸುತ್ತುವರೆದಿದ್ದು, ದಾಳಿಕೋರರನ್ನು ಪತ್ತೆಹಚ್ಚಲು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.