ಬೆಂಗಳೂರು: ರಾಜಧಾನಿ ಬೆಂಗಳೂರು ಮತ್ತು ಉತ್ತರ ಕರ್ನಾಟಕದ ಪ್ರಮುಖ ವಾಣಿಜ್ಯ ನಗರಿ ಹುಬ್ಬಳ್ಳಿ ಮಧ್ಯೆ ಮತ್ತೊಂದು ವಿಮಾನಯಾನ ಅತಿ ಶೀಘ್ರದಲ್ಲೇ ಆರಂಭಗೊಳ್ಳಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
ಬೆಂಗಳೂರು-ಹುಬ್ಬಳ್ಳಿ ಮಧ್ಯೆ ಇದೇ ಮಾರ್ಚ್ 30ರಿಂದ ಮತ್ತೊಂದು ಇಂಡಿಗೋ (IndiGo6E) ವಿಮಾನ ಸಂಚಾರ ಆರಂಭವಾಗಲಿದೆ. ಈ ಎರಡು ಮಹಾನಗರಗಳ ನಡುವೆ ಈಗ ನಿತ್ಯ ಮೂರು ವಿಮಾನಗಳ ಸಂಚಾರ ಆರಂಭವಾದಂತೆ ಆಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಬೆಂಗಳೂರು-ಹುಬ್ಬಳ್ಳಿ ಮಧ್ಯೆ ಈವರೆಗೆ ಎರಡು ವಿಮಾನಗಳ ಸೇವೆಯಿದೆ. ಆದರೆ, ಮತ್ತೊಂದು ವಿಮಾನಯಾನದ ಅವಶ್ಯಕತೆಯಿದ್ದು, ಶೀಘ್ರವೇ ಕ್ರಮ ಕೈಗೊಳ್ಳಿ ಎಂದು ಸಚಿವ ಪ್ರಲ್ಹಾದ ಜೋಶಿ ಅವರು ಇಂದು ಇಂಡಿಗೋ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಇಂಡಿಗೋ ತ್ವರಿತವಾಗಿ ವಿಮಾನ ಸೇವೆಗೆ ನಿರ್ಣಯ ಕೈಗೊಂಡಿದೆ.
ವಿಮಾನ ಹಾರಾಟ ಸಮಯ ಇಂತಿದೆ. Bengaluru – Hubballi 6E7056 9:55 AM – 11:20 AM ಹಾಗೂ Hubballi – Bengaluru 6E 7263 11:55 AM – 1:20 PM. ಈ ವಿಮಾನ ಸೇವೆಯಿಂದ ಹುಬ್ಬಳ್ಳಿ-ಧಾರವಾಡ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳಿಂದ ಬೆಂಗಳೂರಿಗೆ ತೆರಳುವ ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಲಿದೆ.
ಹುಬ್ಬಳ್ಳಿ-ಬೆಂಗಳೂರು ಮಧ್ಯೆ ಮತ್ತೊಂದು ವಿಮಾನ ಸೇವೆ ಕಲ್ಪಿಸಿದ್ದಕ್ಕಾಗಿ ಸಚಿವ ಜೋಶಿ ಅವರು ಇಂಡಿಗೋ ಆಡಳಿತ ವರ್ಗಕ್ಕೆ ಧನ್ಯವಾದ ಹೇಳಿದ್ದಾರೆ. ಅಲ್ಲದೇ, ಹುಬ್ಬಳ್ಳಿ ಮತ್ತು ಅಹ್ಮದಾಬಾದ್ ನಡುವೆಯೂ ವಿಮಾನಯಾನ ಆರಂಭಿಸುವಂತೆ ಇಂಡಿಗೋ ಅಧಿಕಾರಿಗಳ ಗಮನ ಸೆಳೆದಿದ್ದಾರೆ.
English Summary: Union Minister Pralhad Joshi has announced that another flight between the capital Bengaluru and Hubballi, a major commercial city in North Karnataka, will start very soon.