ತಿರುವನಂತಪುರಂ: ಕೇರಳದ ಕೋಝಿಕ್ಕೋಡ್ ಜಿಲ್ಲೆಯಲ್ಲಿ ಕಾರ್ ಚೇಸಿಂಗ್ ರೀಲ್ಸ್ ಶೂಟ್ ಮಾಡುತ್ತಿದ್ದ ವೇಳೆ ಕಾರು ಡಿಕ್ಕಿ ಹೊಡೆದು ಯುವಕನೊಬ್ಬ ಸಾವನ್ನಪ್ಪಿದ್ದ ಧಾರುಣ ಘಟನೆ ನಡೆದಿದೆ. ಯುವಕನನ್ನು ಕೋಝಿಕ್ಕೋಡ್‌ನ ವಡಕರದ ಸುರೇಶ್ ಬಾಬು ಅವರ ಮಗ ಆಲ್ವಿನ್ ವಿ. ಕೆ.(20) ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ಆಲ್ವಿನ್ ರೀಲ್‌ನ ಭಾಗವಾಗಿ ವೇಗವಾಗಿ ಚಲಿಸುತ್ತಿದ್ದ ಕಾರಿನ ವೀಡಿಯೊವನ್ನು ಚಿತ್ರೀಕರಿಸುತ್ತಿದ್ದಾಗ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಜಕದಲ್ಲಿ ನಿಂತಿದ್ದ ಆಲ್ವಿನ್‌ಗೆ ಕಾರು ಡಿಕ್ಕಿ ಹೊಡೆದಿದೆ. ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಆತನ ಜೀವ ಉಳಿಸಲು ಸಾಧ್ಯವಾಗಲಿಲ್ಲ.
ಬಳಸಿದ ಕಾರುಗಳ ಮಾರಾಟದಲ್ಲಿ ತೊಡಗಿರುವ ಖಾಸಗಿ ಏಜೆನ್ಸಿಯ ಪ್ರಚಾರದ ರೀಲ್ಸ್ ತಯಾರಿಕೆಯಲ್ಲಿ ಈ ಯುವಕರು ಭಾಗಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕೋಝಿಕ್ಕೋಡ್‌ನ ವೆಲ್ಲಯಿಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.