ಯಾದಗಿರಿ: ವಿದ್ಯುತ್ ತಂತಿ ತಗುಲಿದ ಪರಿಣಾಮ ಉತ್ತಮವಾಗಿ ಬೆಳೆದಿದ್ದ ಮೂರು ಎಕರೆಯಷ್ಟು ಕಬ್ಬಿನ ಬೆಳೆ ಸುಟ್ಟು ಭಸ್ಮವಾದ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ಜೋಗುಂಡುಭಾವಿಯಲ್ಲಿ ನಡೆದಿದೆ. ಗ್ರಾಮದ ಶರಣಪ್ಪ ಬಿಜ್ಜುರ್ ಎಂಬ ರೈತನಿಗೆ ಸೇರಿದ ಕಬ್ಬಿನ ಗದ್ದೆ ಇದಾಗಿದೆ.
ಭಾನುವಾರ ಮಧ್ಯಾಹ್ನದ ವೇಳೆಗೆ ಅವಘಡ ಸಂಭವಿಸಿದ್ದು ಬೆಳೆದು ನಿಂತಿದ್ದ ಕಬ್ಬಿಗೆ ವಿದ್ಯುತ್ ತಂತಿ ತಗುಲಿದ ಪರಿಣಾಮ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಅಗ್ನಿ ಅವಘಡ ಉಂಟಾಗಿದೆ. ಈ ವೇಳೆ ಸಮೀಪದ ಗದ್ದೆಗಳಲ್ಲಿದ್ದ ರೈತರು ಸೇರಿ ಹರಸಾಹಸಪಟ್ಟು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತೋಟದ ಮನೆಯ ವಿದ್ಯುತ್ ತಂತಿ ಸ್ಪರ್ಶಿಸಿ ಅವಘಡ ಸಂಭವಿಸಿದೆ ಎನ್ನಲಾಗಿದ್ದು, 6 ಎಕರೆ ಕಬ್ಬಿನ ಬೆಳೆಯಲ್ಲಿ 3 ಎಕರೆ ಕಬ್ಬು ಸುಟ್ಟು ನಾಶವಾಗಿದೆ. ನಾರಾಯಣಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅವಘಡ ಸಂಭವಿಸಿದೆ.