ವಿಜಯನಗರ: ವಿಜಯನಗರ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್.ಪಿ ಅವರು ಹರಪನಹಳ್ಳಿ ತಾಲೂಕಿನ ಅರಸಿಕೇರೆ ಹೋಬಳಿಯ ಉಚ್ಚಂಗಿದುರ್ಗ ಗ್ರಾಮದಲ್ಲಿ ಸೆ.17ರಂದು ಗ್ರಾಮವಾಸ್ತವ್ಯ ನಡೆಸಿ ಗ್ರಾಮಸ್ಥರ ದೂರು-ದುಮ್ಮಾನ ಆಲಿಸಲಿದ್ದಾರೆ. ಇದಕ್ಕಾಗಿ ಎಲ್ಲ ಸಿದ್ಧತೆಗಳು ಭರದಿಂದ ಸಾಗಿದ್ದು, ಜಿಲ್ಲಾಧಿಕಾರಿಗಳಿಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಾಥ್ ನೀಡಲಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಎನ್.ಮಹೇಶ್‍ಬಾಬು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇನ್ನು, ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್.ಪಿ ಅವರು ಸ್ಥಳದಲ್ಲಿಯೇ ಅನೇಕ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲಿದ್ದಾರೆ ಮತ್ತು ಉಳಿದ ಸಮಸ್ಯೆಗಳಿಗೆ ಕಾಲಮಿತಿಯಲ್ಲಿ ಪರಿಹರಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಿದ್ದು, ಗ್ರಾಮಸ್ಥರು ತಮ್ಮ ದೂರು-ದುಮ್ಮಾನ ಹಾಗೂ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳಿಗೆ ಹೇಳಿಕೊಳ್ಳಲು ಈ ಮೂಲಕ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಜ್ಜಾಗಿದ್ದಾರೆ.
ಜಿಲ್ಲಾಧಿಕಾರಿಗಳು ಉಚ್ಚಂಗಿದುರ್ಗ ಗ್ರಾಮದಲ್ಲಿ ಗ್ರಾಮವಾಸ್ತವ್ಯ ನಡೆಸಲಿದ್ದು, ತಾಲೂಕುಮಟ್ಟದಲ್ಲಿ ಸಹಾಯಕ ಆಯುಕ್ತರು ಹಾಗೂ ತಹಸೀಲ್ದಾರರು ಸಹ ಒಂದೊಂದು ಊರುಗಳನ್ನು ಗುರುತಿಸಿ ಆ ಗ್ರಾಮಗಳಲ್ಲಿ ಗ್ರಾಮವಾಸ್ತವ್ಯ ನಡೆಸುವ ಮೂಲಕ ಜನರ ಸಮಸ್ಯೆಗಳಿಗೆ ದನಿಯಾಗುವ ಕೆಲಸ ಮಾಡಲಿದ್ದಾರೆ.
ವಿವಿಧೆಡೆ ಗ್ರಾಮ ವಾಸ್ತವ್ಯದ ವಿವರ:
ಸೆ.17ರಂದು ಹರಪನಹಳ್ಳಿ ತಾಲೂಕಿನ ಅರಸಿಕೇರೆ ಹೋಬಳಿಯ ಉಚ್ಚಂಗಿದುರ್ಗ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು ಮತ್ತು ಹರಪನಹಳ್ಳಿಯ ತಹಶೀಲ್ದಾರರು, ಹೂವಿನಹಡಗಲಿ ತಾಲೂಕಿ ಇಟ್ಟಗಿ ಹೋಬಳಿಯ ಹುಗುಲೂರು ಗ್ರಾಮದಲ್ಲಿ ತಹಶೀಲ್ದಾರರು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಕೂಡ್ಲಿಗಿ ತಾಲೂಕಿನ ಗುಡೇಕೊಟೆ ಹೋಬಳಿಯ ರಾಮದುರ್ಗ ಗ್ರಾಮದಲ್ಲಿ ತಾಲೂಕಿನ ತಹಸೀಲ್ದಾರರು ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಹೊಸಪೇಟೆ ತಾಲೂಕಿನ ಹೊಸಪೇಟೆ ಹೋಬಳಿಯ ವಡ್ಡರಹಳ್ಳಿ ಗ್ರಾಮದಲ್ಲಿ ತಾಲೂಕಿನ ತಹಸೀಲ್ದಾರರು ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಹಗರಿಬೊಮ್ಮನಹಳ್ಳಿ ತಾಲೂಕಿನ ಹಗರಿಬೊಮ್ಮನಹಳ್ಳಿ ಹೋಬಳಿಯ ಹಂಪಾಪಟ್ಟಣ ಗ್ರಾಮದಲ್ಲಿ ತಾಲೂಕಿನ ತಹಸೀಲ್ದಾರರು ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಕೊಟ್ಟೂರು ತಾಲೂಕಿನ ಕೊಟ್ಟೂರು ಹೋಬಳಿಯ ಉಜ್ಜಿನಿ ಗ್ರಾಮದಲ್ಲಿ ತಾಲೂಕಿನ ತಹಸೀಲ್ದಾರರು ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಗ್ರಾಮ ವ್ಯಾಸ್ತವ್ಯ ಮಾಡಲಿದ್ದಾರೆ.
ಗ್ರಾಮ ವಾಸ್ತವ್ಯದಲ್ಲಿ ಜಿಲ್ಲಾಧಿಕಾರಿಗಳು, ತಹಸೀಲ್ದಾರರು ಹಾಗೂ ಅಧಿಕಾರಿಗಳು ಬೆಳಗ್ಗೆ 10ರಿಂದ ಸಂಜೆಯವರೆಗೆ ಜನರ ಅಹವಾಲುಗಳನ್ನು ಆಲಿಸಲಿದ್ದಾರೆ. ನಂತರ ಗ್ರಾಮೀಣ ಪ್ರತಿಭೆ ಹಾಗೂ ಕಲೆಗೆ ಪ್ರೋತ್ಸಾಹಿಸುವಂತೆ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ.
ಗ್ರಾಮ ವಾಸ್ತವ್ಯದಲ್ಲಿ ಕೈಗೊಳ್ಳಲಾಗುವ ಕ್ರಮಗಳಿವು:
ಗ್ರಾಮವಾಸ್ತವ್ಯದ ಸಂದರ್ಭದಲ್ಲಿ ಗ್ರಾಮದಲ್ಲಿನ ಎಲ್ಲಾ ಪಹಣಿಯಲ್ಲಿನ ಲೋಪದೋಷಗಳು, ಪಹಣಿ ಕಾಲಂ 3 ಮತ್ತು ಆಕಾರ ಬಂದ್ ತಾಳೆ ಹೊಂದಿರುವ ಬಗ್ಗೆ ಖಚಿತಪಡಿಸಿ, ಎಲ್ಲಾ ಪಹಣಿಗಳಲ್ಲಿಯೂ ಕೂಡ ಕಾಲಂ 3 ಮತ್ತು ಕಾಲಂ 9 ತಾಳೆ ಆಗುತ್ತವೆಯೋ ಅಥವಾ ಇಲ್ಲವೋ ಎಂಬ ಬಗ್ಗೆ ಖಚಿತ ಪಡಿಕೊಳ್ಳುವುದು ಮತ್ತು ಲೋಪಗಳು ಕಂಡುಬಂದಿರುವ ಪ್ರಕರಣಗಳನ್ನು ಗುರುತಿಸಿ ವಿಲೇ ಮಾಡಲು ಆದೇಶ ಹೊರಡಿಸಿ ನಿಯಮಾನುಸಾರ ಕ್ರಮ ಕೈಗೊಳ್ಳುವುದು.
ಗ್ರಾಮದಲ್ಲಿನ ಪಹಣಿಗಳನ್ನು ಪರಿಶೀಲಿಸಿ ಪೌತಿ ಪ್ರಕರಣಗಳನ್ನು ಗುರುತಿಸಿ ನೈಜ ವಾರಸುದಾರರ ಹೆಸರುಗಳಿಗೆ ಖಾತೆ ಬದಲಾವಣೆ ಮಾಡುವ ಬಗ್ಗೆ ಪೌತಿ ಆದೇಶಗಳನ್ನು ಸಿದ್ದತೆಯಲ್ಲಿಟ್ಟುಕೊಳ್ಳವುದು ಮತ್ತು ಗ್ರಾಮದ ಎಲ್ಲಾ ಅರ್ಹ ವ್ಯಕ್ತಿಗಳಿಗೆ ಪಿಂಚಣಿ ಸೌಲಭ್ಯ ದೊರೆಯುತ್ತಿರುವ ಬಗ್ಗೆ ಖಚಿತಪಡಿಸಿಕೊಂಡು ಪಿಂಚಣಿ ಸೌಲಭ್ಯ ಪಡೆಯದೇ ಇರುವವರಿಂದ ಸಂಬಂದಿಸಿದ ದಾಖಲೆಗಳನ್ನು ಸಂಗ್ರಹಿಸಿ ಅರ್ಹ ಪ್ರಕರಣಗಳಿಗೆ ಸ್ಥಳದಲ್ಲಿಯೇ ಜಿಲ್ಲಾಧಿಕಾರಿಗಳ ಸಮಕ್ಷಮ ಆದೇಶ ನೀಡಲು ಕ್ರಮ ಕೈಗೊಳ್ಳಲಾಗುವುದು.
ಗ್ರಾಮದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಸ್ಮಶಾನ ಭೂಮಿ ಇದೆಯೋ ಅಥವಾ ಇಲ್ಲವೇ ಎಂಬ ಬಗ್ಗೆ ಪರಿಶೀಲಿಸಿ, ಒಂದು ವೇಳೆ ಸ್ಮಶಾನಕ್ಕೆ ಜಮೀನು ಅಗತ್ಯವಿದ್ದಲ್ಲಿ ಮೊದಲಿಗೆ ಸರಕಾರಿ ಜಮೀನು ಗುರುತಿಸುವುದು ಮತ್ತು ಸರಕಾರಿ ಜಮೀನು ಲಭ್ಯವಿಲ್ಲದೇ ಇದ್ದಲ್ಲಿ ಖಾಸಗಿ ಜಮೀನನ್ನು ಗುರುತಿಸಿ ಮಂಜೂರಿಗೆ ಪ್ರಸ್ತಾವನೆ ಸಲ್ಲಿಸಲು ಕ್ರಮಕೈಗೊಳ್ಳುವುದು.
ಗ್ರಾಮದಲ್ಲಿ ಆಶ್ರಯ ಯೋಜನೆ ಅವಶ್ಯಕತೆ ಇದ್ದಲ್ಲಿ ಲಭ್ಯ ಜಮೀನು ಗುರುತಿಸಿ ಕಾಯ್ದಿರಿಸಲು ಕ್ರಮವಹಿಸಿ ಪ್ರಸ್ತಾವನೆ ಸಲ್ಲಿಸುವುದು ಮತ್ತು ಗ್ರಾಮದಲ್ಲಿ ಸರಕಾರಿ ಜಮೀನು ಹಾಗೂ ಸಾರ್ವಜನಿಕ ಉದ್ದೇಶಗಳಿಗೆ ಕಾಯ್ದಿರಿಸಲಾಗಿರುವ ಜಮೀನುಗಳು ಅಕ್ರಮವಾಗಿ ಒತ್ತುವರಿಯಾಗಿದ್ದಲ್ಲಿ ಅಂತಹ ಜಮೀನುಗಳನ್ನು ಗುರುತಿಸಿ ತೆರವುಗೊಳಿಸಲು ಕ್ರಮಕೈಗೊಳ್ಳುವುದು.
ಬರ ಮತ್ತು ಪ್ರವಾಹ ಇದ್ದಲ್ಲಿ ಬರ ಪರಿಸ್ಥಿತಿಯಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು, ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ಪ್ರತಿ ನಿತ್ಯ ಕುಡಿಯುವ ನೀರಿನ ತೊಂದರೆ ಬಗ್ಗೆ ಪರಿಸ್ಥಿತಿಯನ್ನು ಅವಲೋಕಿಸಿ ಸಮಸ್ಯೆ ಇದ್ದಲ್ಲಿ ಟ್ಯಾಂಕರ್ ಮೂಲಕ ಅಥವಾ ಖಾಸಗಿ ಬೋರವೆಲ್‍ಗಳನ್ನು ಬಾಡಿಗೆ ಆಧಾರದ ಮೇಲೆ ಪಡೆದು ನೀರು ಸರಬರಾಜು ಮಾಡಲು ಕ್ರಮ ವಹಿಸುವುದು ಮತ್ತು ಪ್ರವಾಹ ಪರಿಸ್ಥಿತಿ ಉದ್ಭವಿಸಿದಲ್ಲಿ ವಿವಿಧ ಹಾನಿಗಳಿಗೀಡಾದ ಸಂತ್ರಸ್ಥರಿಗೆ ಎಸ್.ಡಿ.ಅರ್.ಎಫ್. ಮಾರ್ಗಸೂಚಿಯ ಪ್ರಕಾರ ಪರಿಹಾರ ನೀಡಲು ಬೇಕಾಗುವ ಎಲ್ಲಾ ತರಹದ ದಾಖಲೆಗಳನ್ನು ಗ್ರಾಮ ಮಟ್ಟದಲ್ಲಿ ಮತ್ತು ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ನಿಗಧಿತ ಸಮಯದಲ್ಲಿ ಸಂಗ್ರಹಿಸಿ ಮೇಲಾಧಿಕಾರಿಗಳಿಗೆ ಸಲ್ಲಿಸಿ ಪರಿಹಾರ ನೀಡಲು ಕ್ರಮವಹಿಸಬೇಕು ಎಂದು ತಿಳಿಸಿದ್ದಾರೆ.
ಪೋಡಿ, ಹದ್ದು ಬಸ್ತು, ಪೋಡಿ ಮುಕ್ತಗ್ರಾಮ, ದರಕಾಸ್ತು ಪೋಡಿ (ನಮೂನೆ 1-5 ಮತ್ತು ನಮೂನೆ 6-10 ನ್ನು ಭರ್ತಿ ಮಾಡಿ ದರಕಾಸ್ತು ಪೋಡಿ ಮಾಡುವುದು), ಕಂದಾಯ ಗ್ರಾಮಗಳ ರಚನೆ ಸೇರಿದಂತೆ ಹಾಲಿ ಕಂದಾಯ ಗ್ರಾಮಗಳ ಪಕ್ಕದಲ್ಲಿ ಉಪ ಗ್ರಾಮಗಳನ್ನು ಸರ್ಕಾರದ ಆದೇಶ ಸಂಖ್ಯೆ/ಕಂ.ಇ/ಭೂದಾಪು/2016 ದಿನಾಂಕ 01-03-2016 ರಂತೆ 50 ಕುಟುಂಬಗಳು, 250 ಜನಸಂಖ್ಯೆ, ಮೂಲ ಗ್ರಾಮದಿಂದ ಉಪ ಗ್ರಾಮಕ್ಕೆ ಒಂದು ಕಿ.ಮೀ ಅಂತರವಿರುವ ಹಾಗೂ ಉಪ ಗ್ರಾಮಕ್ಕೆ ಕನಿಷ್ಟ 100 ಎಕರೆ ಜಮೀನುಗಳು ಇರುವ ಉಪ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು ಪ್ರಸ್ತಾವನೆಯನ್ನು ಸಲ್ಲಿಸುವ ಕುರಿತು ಕ್ರಮಕೈಗೊಳ್ಳುವುದು.
ಅಷ್ಟೇ ಅಲ್ಲ, ಗ್ರಾಮದಲ್ಲಿ ಎಸ್.ಸಿ/ಎಸ್.ಟಿ ಬಿಸಿಎಂ ವಸತಿ ನಿಲಯಗಳಿದ್ದಲ್ಲಿ ಭೇಟಿ ನೀಡಿ ಸುಸ್ಥಿಯಲ್ಲಿರುವ ಬಗ್ಗೆ ಕ್ರಮ ವಹಿಸಿ, ಗ್ರಾಮದಲ್ಲಿ ಅರ್ಹ ಬಡ ಕುಟುಂಬಗಳಿಗೆ ಈ ವರೆಗೂ ಬಿ.ಪಿ.ಎಲ್ ಕಾರ್ಡ್ ದೊರೆಯದೇ ಇರುವ ಕುಟುಂಬಗಳನ್ನು ಗುರುತಿಸಿ ಅರ್ಹರಿದ್ದಲ್ಲಿ ಬಿ.ಪಿ.ಎಲ್ ಕಾರ್ಡ ನೀಡುವ ಕುರಿತು ಹಾಗೂ ಅನರ್ಹ ಬಿ.ಪಿ.ಎಲ್ ಕಾರ್ಡ್ ಹೊಂದಿರುವವರನ್ನು ಗುರುತಿಸಿ ಸದರಿ ಅನರ್ಹ ಬಿ.ಪಿ.ಎಲ್ ಕಾರ್ಡ್‍ಗಳನ್ನು ರದ್ದುಪಡಿಸಲು ಕ್ರಮ ಕೈಗೊಳ್ಳಲಾಗುತ್ತದೆ.
ಗುಡಿಸಲು ರಹಿತ ವಾಸದ ಮನೆಗಳ ನಿರ್ಮಾಣ;
ಇನ್ನು, ಗ್ರಾಮಗಳಿಗೆ ಭೇಟಿ ನೀಡಿದ ಸಮಯದಲ್ಲಿ ಗುಡಿಸಲುಗಳು ಇರುವ ವಾಸದ ಮನೆಗಳನ್ನು ಪತ್ತೆಹಚ್ಚಿ ಲಭ್ಯವಿರುವ ಸರ್ಕಾರದ ವಿವಿಧ ಯೋಜನೆಗಳಡಿ ಮನೆ ಕಟ್ಟಲು ಅನುದಾನ ನೀಡುವಂತೆ ಸಂಬಂಧಪಟ್ಟ ಜಿಲ್ಲಾ ಮಟ್ಟದ ಅಧಿಕಾರಿಗೆ ನಿರ್ದೇಶನವನ್ನು ನೀಡುವುದು. ಆ ಗ್ರಾಮದ ಗುಡಿಸಲು ರಹಿತ ವಾಸದ ಮನೆ ನಿರ್ಮಾಣ ಮಾಡಲು ಸಹಕಾರಿಯಾಗುತ್ತದೆ.
ಜಾತಿ ಮತ್ತು ಆಧಾಯ ಪ್ರಮಾಣ ಪತ್ರಗಳು ಹಾಗೂ ಆಧಾರ ಕಾರ್ಡ ಹೊಂದಿಳ್ಳದವರನ್ನು ಗುರುತಿಸಿ ಆನ್‍ಲೈನ್ ಮುಖಾಂತರ ಸಂಬಂಧಿಸಿದ ಹೋಬಳಿಯ ಮಟ್ಟದ ನಾಡ ಕಛೇರಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆಂದು ಸಂಬಂದಿಸಿದ ಗ್ರಾಮಗಳಲ್ಲಿ ಭಿತ್ತಿ ಪತ್ರಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸಬೇಕು ಮತ್ತು ಗ್ರಾಮದಲ್ಲಿಯ ಇತರೆ ಕುಂದು ಕೊರತೆಗಳನ್ನು ಸಹ ಆಲಿಸಿ ಪರಿಹಾರ ಕಂಡುಕೊಳ್ಳಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.