ದಾವಣಗೆರೆ: ನಾಲೆಯಲ್ಲಿ ಈಜಾಡಲು ತೆರಳಿದ್ದ ಬಾಲಕರಿಬ್ಬರು ನೀರಲ್ಲಿ ಕೊಚ್ಚಿಹೋದ ಧಾರುಣ ಘಟನೆ ತಾಲ್ಲೂಕಿನ ಕುರ್ಕಿ ಗ್ರಾಮದಲ್ಲಿ ಭಾನುವಾರ ನಡೆದಿದೆ. ಮೃತರನ್ನು ಕುರ್ಕಿ ಗ್ರಾಮದ ಪಾಂಡು (16) ಮತ್ತು ತುರ್ಚಘಟ್ಟ ಗ್ರಾಮದ ಯತೀಂದ್ರ (16) ಎಂದು ಗುರುತಿಸಲಾಗಿದೆ.
ಬಾಲಕರಿಬ್ಬರೂ ದಾವಣಗೆರೆಯ ಗುರುಕುಲ್ ರೆಸಿಡೆನ್ಷಿಯಲ್ ಸ್ಕೂಲ್ನಲ್ಲಿ ಎಸ್ಎಸ್ಎಲ್ಸಿ ಓದುತ್ತಿದ್ದರು. ಭಾನುವಾರ ಶಾಲೆಗೆ ರಜೆಯಿದ್ದ ಕಾರಣ ಇಬ್ಬರೂ ಕುರ್ಕಿ ಗ್ರಾಮಕ್ಕೆ ಹೇರ್ ಕಟಿಂಗ್‌ಗೆಂದು ಬಂದಿದ್ದರು.
ಪಾಂಡು ಮತ್ತು ಯತೀಂದ್ರ, ಗ್ರಾಮದ ಬಳಿ ಹರಿಯುವ ದೊಡ್ಡ ಭದ್ರಾ ಕಾಲುವೆಯಲ್ಲಿ ಈಜಲು ಬಂದಿದ್ದರು. ಪಾಂಡು ಈಜು ಬರುತ್ತಿತ್ತು, ಆದರೆ ಯತೀಂದ್ರನಿಗೆ ಈಜಲು ಬರಲಿಲ್ಲ. ಮೊದಲು ಪಾಂಡು ನದಿಗೆ ಧುಮುಕಿದ್ದು, ನಂತರ ಯತೀಂದ್ರ ಸಹ ಹಾರಿದ್ದಾನೆ.
ಈ ವೇಳೆ ನೀರಿನಲ್ಲಿ ಮೇಲೆ ಬರಲಾಗದೇ ಯತೀಂದ್ರ ಮುಳುಗುತ್ತಿದ್ದಾಗ, ಪಾಂಡು ಅವನನ್ನು ರಕ್ಷಿಸಲು ಮುಂದಾಗಿದ್ದಾನೆ. ಆದರೆ ಈ ಸಂದರ್ಭದಲ್ಲಿ ಆತನನ್ನು ರಕ್ಷಣೆ ಮಾಡಲಾಗದೇ ಇಬ್ಬರೂ ನೀರಿನಲ್ಲಿ ಮುಳುಗಿದ್ದಾರೆ.
ಬಾಲಕರು ಈಜುತ್ತಿದ್ದ ಸ್ಥಳದ ಸಮೀಪದಲ್ಲಿ ನಾಲೆಗೆ ಗೇಟ್ ಅಳವಡಿಸಲಾಗಿದ್ದು, ಗೇಟ್ ಬಳಿ ಪಾಂಡುವಿನ ಮೃತದೇಹ ಪತ್ತೆಯಾಗಿದೆ. ಆದರೆ ಯತೀಂದ್ರನ ಸುಳಿವು ಮಾತ್ರ ಇನ್ನೂ ಸಿಕ್ಕಿಲ್ಲ.
ಸ್ಥಳಕ್ಕೆ ಧಾವಿಸಿದ ಶಾಸಕ ಕೆ.ಎಸ್.ಬಸವಂತಪ್ಪ ಮೃತದೇಹಗಳ ಶೋಧ ಕಾರ್ಯಕ್ಕೆ ನೆರವು ನೀಡಿದ್ದು, ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.