ಕಲಬುರಗಿ: ಜಿಲ್ಲೆಯ ಯಡ್ರಾಮಿ ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ ಓರ್ವ ಬಾಲಕ ಮತ್ತು ಬಾಲಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹಿಂದುಳಿದ ವರ್ಗಕ್ಕೆ ಸೇರಿದ ಬಾಲಕ ಮತ್ತು ಅಲ್ಪಸಂಖ್ಯಾತ ಸಮುದಾಯದ ಬಾಲಕಿಯ ಶವಗಳು ಮಲ್ಲಿ-ಐನಾಪುರ ರಸ್ತೆಯ ಹೊಲವೊಂದರಲ್ಲಿ ಒಂದೇ ಹಗ್ಗಕ್ಕೆ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ. ಹುಡುಗ ನಾಗರಹಳ್ಳಿ ಗ್ರಾಮದವನಾಗಿದ್ದರೆ, ಹುಡುಗಿ ಮಲ್ಲಿ ಗ್ರಾಮದವಳು. ಇಬ್ಬರಿಗೂ 16 ವರ್ಷ ವಯಸ್ಸಾಗಿತ್ತು.
ಇಬ್ಬರೂ ಪ್ರೀತಿಸುತ್ತಿದ್ದರು ಎಂದು ಹೇಳಲಾಗುತ್ತಿತ್ತು, ಆದರೆ ತಮ್ಮ ಕುಟುಂಬಗಳಿಗೆ ತಿಳಿಸಿರಲಿಲ್ಲ. ಬಾಲಕಿ ಶುಕ್ರವಾರ ರಾತ್ರಿ ಮನೆಯಲ್ಲಿ ಮಲಗಿದ್ದಳು, ಆದರೆ ಶನಿವಾರ ಬೆಳಿಗ್ಗೆ ಪತ್ತೆಯಾಗಿಲ್ಲ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಆಕೆ ಬಹಿರ್ದೆಸೆಗೆ ಹೋಗಿದ್ದಾಳೆ ಎಂದು ಕುಟುಂಬಸ್ಥರು ಭಾವಿಸಿದರು. ಆದರೆ ನಂತರ, ಆ ಹುಡುಗಿ ಮತ್ತು ಹುಡುಗ ಹೊಲವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಯಾರೋ ಅವರಿಗೆ ಮಾಹಿತಿ ನೀಡಿದರು. ಇಬ್ಬರ ಕುಟುಂಬ ಸದಸ್ಯರು ಸ್ಥಳಕ್ಕೆ ಆಗಮಿಸಿ, ಶವಗಳನ್ನು ತೆಗೆದುಕೊಂಡು ಅಂತಿಮ ವಿಧಿಗಳನ್ನು ನೆರವೇರಿಸಿದರು.
ಅಂತ್ಯಕ್ರಿಯೆಯ ನಂತರವೇ ಪೊಲೀಸರಿಗೆ ಘಟನೆಯ ಬಗ್ಗೆ ತಿಳಿಯಿತು, ಆದರೆ ಎರಡೂ ಕುಟುಂಬಗಳು ಈ ಘಟನೆಗೆ ಯಾರನ್ನೂ ಶಂಕಿಸಿಲ್ಲ ಎಂದು ಪೊಲೀಸರಿಗೆ ತಿಳಿಸಿವೆ. ಮೂಲಗಳ ಪ್ರಕಾರ, ಹುಡುಗಿಯ ಕುಟುಂಬವು ಅವಳ ಮದುವೆ ಮಾಡಲು ಯೋಜಿಸುತ್ತಿತ್ತು, ಮತ್ತು ಇದರಿಂದ ನಿರಾಶೆಗೊಂಡ ಆಕೆ ತನ್ನ ಗೆಳೆಯನೊಂದಿಗೆ ಆತ್ಮಹತ್ಯೆ ಮಾಡಿಕೊಂಡಳು.