ಗದಗ:16 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿಯನ್ನಾಗಿ ಮಾಡಿದ ಆರೋಪದ ಮೇಲೆ ಐವತ್ತೊಂದು ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಸೋಮವಾರ ಅಪ್ರಾಪ್ತ ಬಾಲಕಿಯ ಕಾಲುಗಳಲ್ಲಿ ಊತ ಕಾಣಿಸಿಕೊಂಡಿದೆ ಎಂದು ಆಸ್ಪತ್ರೆಗೆ ಕರೆದೊಯ್ಯಿದಾಗ ಈ ವಿಷಯ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಯ ತಾಯಿಯೂ ಸಹ ಆಕೆಯ ಜೊತೆಗಿದ್ದರು ಎಂದು ಹೇಳಲಾಗಿದೆ.
ಸ್ಕ್ಯಾನ್ ಮತ್ತು ರಕ್ತ ಪರೀಕ್ಷೆಗಳನ್ನು ನಡೆಸಿದ ನಂತರ, ವೈದ್ಯರು ಅಪ್ರಾಪ್ತ ಮಗಳು ಗರ್ಭಿಣಿಯಾಗಿದ್ದಾಳೆ ಎಂದು ದೃಢಪಡಿಸಿದರು. ಬಾಲಕಿ 31 ವಾರಗಳ ಗರ್ಭಿಣಿಯಾಗಿದ್ದಾಳೆ ಎಂದು ವರದಿಯಾಗಿದೆ.
ಈ ವಿಷಯದ ಬಗ್ಗೆ ತಾಯಿ ಮಗಳನ್ನು ಕೇಳಿದಾಗ, ಕಳೆದ ಒಂದು ವರ್ಷದಿಂದ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ತನ್ನ ತಂದೆ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ನಡೆಸುತ್ತಿದ್ದ ಎಂದು ಮಗಳು ಬಹಿರಂಗಪಡಿಸಿದ್ದಾಳೆ.
ಮನೆಯವರಿಗೆ ವಿಷಯ ಹೇಳಬಾರದು ಎಂದು ತಂದೆ ಅಪ್ರಾಪ್ತ ಮಗಳಿಗೆ ಬೆದರಿಕೆ ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, “ಸಂತ್ರಸ್ತಳ ತಾಯಿಯ ದೂರಿನ ಆಧಾರದ ಮೇಲೆ, ನಾವು ಮುಳಗುಂದ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಮತ್ತು ಬೆದರಿಕೆ ಪ್ರಕರಣವನ್ನು ದಾಖಲಿಸಿದ್ದೇವೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯಡಿಯಲ್ಲಿ ಆರೋಪಿ ತಂದೆಯನ್ನು ಮಂಗಳವಾರ ಬಂಧಿಸಿದ್ದೇವೆ” ಎಂದು ಹೇಳಿದರು.
ಬಾಲಕಿಗೆ ಕೌನ್ಸೆಲಿಂಗ್ ಸೇವೆಗಳನ್ನು ಒದಗಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಬಾಲಕಿಯ ವೈದ್ಯಕೀಯ ಪರೀಕ್ಷೆಯ ಆಧಾರದ ಮೇಲೆ ಮುಂದಿನ ಕ್ರಮಗಳನ್ನು ನಿರ್ಧರಿಸಿ, ತನಿಖೆ ನಡೆಸುತ್ತೇವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.