ಶಿರಸಿ: ಪರೀಕ್ಷೆ ಬರೆಯಲು ಬೈಕ್‌ನಲ್ಲಿ ತೆರಳುತ್ತಿದ್ದ ವಿದ್ಯಾರ್ಥಿಯೋರ್ವ ನಿಂತಿದ್ದ ಲಾರಿಗೆ ಗುದ್ದಿಕೊಂಡು ಧಾರುಣವಾಗಿ ಸಾವನ್ನಪಿದ ಘಟನೆ ಶಿರಸಿ-ಕುಮಟಾ ರಾಷ್ಟ್ರೀಯ ಹೆದ್ದಾರಿ 766EEಯ ಹಾರೂಗಾರ ಬಳಿ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಅಮ್ಮಿನಳ್ಳಿ ಸಮೀಪದ ಮನೋಜ್.ಜಿ.ಹೆಗಡೆ ಎಂದು ಗುರುತಿಸಲಾಗಿದೆ.
ಮನೋಜ್ ಶಿರಸಿಯ ಎಂಇಎಸ್ ಸಂಸ್ಥೆಯ ಆರ್.ಎನ್.ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮೊದಲ ವರ್ಷದ ಎಲೆಕ್ಟ್ರಾನಿಕ್ಸ್ ಡಿಪ್ಲೋಮಾ ಓದುತ್ತಿದ್ದ. ಇಂದು ಪರೀಕ್ಷೆ ಇದ್ದ ಹಿನ್ನಲೆ ಬೆಳಿಗ್ಗೆಯೇ ಮನೆಯಿಂದ ಬೈಕ್ ತೆಗೆದುಕೊಂಡು ಹೊರಟಿದ್ದ. ಆದರೆ ಹಾರೂಗಾರ ಸಮೀಪ ಆಗಮಿಸುತ್ತಿದ್ದ ವೇಳೆ ನಿಂತಿದ್ದ ಲಾರಿ ಗಮನಿಸದೇ ಡಿಕ್ಕಿಯಾಗಿದ್ದು, ಅಪಘಾತದ ರಭಸಕ್ಕೆ ಗಂಭೀರವಾಗಿ ಗಾಯಗೊಂಡಿದ್ದ.
ಸ್ಥಳದಲ್ಲಿದ್ದ ಸಾರ್ವಜನಿಕರು ವಿದ್ಯಾರ್ಥಿಯನ್ನು ಆಸ್ಪತ್ರೆಗೆ ಸೇರಿಸಲು ಪ್ರಯತ್ನಿಸಿದರಾದರೂ ಆಂಬ್ಯುಲೆನ್ಸ್ ಮೂಲಕ ಸಾಗಿಸುವ ವೇಳೆಗಾಗಲೇ ಕೊನೆಯುಸಿರೆಳೆದಿದ್ದಾನೆ. ವಿದ್ಯಾರ್ಥಿ ಪರೀಕ್ಷೆ ಮುಗಿಸಿ ಹಲ್ಲಿನ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ತೆರಳುವವನಿದ್ದ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಶಿರಸಿ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.