ಶಿರಸಿ: ಉತ್ತರಕನ್ನಡ ಜಿಲ್ಲೆಯ ಸಾವಿರಾರು ಆಯ್ಯಪ್ಪಸ್ವಾಮಿ ಭಕ್ತರಿಗೆ ಮಾಲೆ ಹಾಕಿಸಿ ಅವರಿಗೆ ಅಯ್ಯಪ್ಪ ಸ್ವಾಮಿಯ ದರ್ಶನ ಭಾಗ್ಯ ಕಲ್ಪಿಸಿದ್ದ ಹಿರಿಯ ಗುರುಸ್ವಾಮಿ ಎ.ಆರ್.ನಾಯರ್(85) ಕೇರಳದ ಗುರುವಾಯನೂರಲ್ಲಿ ಬುಧವಾರ ಬೆಳಿಗ್ಗೆ ನಿಧನ ಹೊಂದಿದರು.
ಕೆ.ಎಸ್.ಆರ್.ಟಿ ನಿವೃತ್ತ ಚಾಲಕರಾಗಿದ್ದ ಅವರು ಶಿರಸಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಶಿರಸಿಯ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಗುರುಸ್ವಾಮಿಗಳಾಗಿ ಭಕ್ತರಿಗೆ ಮಾಲೆ ಹಾಕಿಸಿ ಅವರಿಗೆ ಮಾರ್ಗದರ್ಶನ ಮಾಡುತ್ತಿದ್ದರು. ಅವರು ಸುಮಾರು 65 ವರ್ಷಗಳಿಂದ ಅಯ್ಯಪ್ಪ ಸ್ವಾಮಿ ಮಾಲೆ ಹಾಕಿ ತಮ್ಮ ಜೊತೆಯಲ್ಲಿ ಸಾವಿರಾರು ಅಯ್ಯಪ್ಪಸ್ವಾಮಿ ಭಕ್ತರಿಗೆ ದೇವರ ದರ್ಶನಮಾಡಿಸಿದ ಕೀರ್ತಿ ಗುರುಸ್ವಾಮಿಯವರದ್ದಾಗಿತ್ತು.
ಗುರುವಾಯನೂರಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕಳೆದ ಮೂರು ವರ್ಷಗಳಿಂದ ಶಿರಸಿ ಅಯ್ಯಪ್ಪಸ್ವಾಮಿ ದೇವಸ್ಥಾನದ ಸಂಪರ್ಕ ಕಳಚಿಕೊಂಡಿದ್ದರೂ ಅಲ್ಲಿಂದಲೇ ಅಯ್ಯಪ್ಪದಾರಿಗಳಿಗೆ ಸಲಹೆ ಸೂಚನೆ ನೀಡುತ್ತಿದ್ದರು.