ಸಿದ್ದಾಪುರ: ತಾಲ್ಲೂಕಿನ ಕಾನಸೂರು ಬಳಿಯ ಲಕ್ಕಿಸವಲು ಗ್ರಾಮದಲ್ಲಿ ತೆಂಗಿನಕಾಯಿಗಳನ್ನು ಒಣಗಿಸಲು ಹಾಕಲಾಗಿದ್ದ ಶೆಡ್ನಲ್ಲಿ ನಾಗರಹಾವು ಪ್ರತ್ಯಕ್ಷವಾಗಿ ಆತಂಕ ಮೂಡಿಸಿದ ಘಟನೆ ನಡೆದಿದೆ. ಗ್ರಾಮದ ಮಹಾಬಲೇಶ್ವರ ಹೆಗಡೆ ಎಂಬುವವರ ಮನೆಯಲ್ಲಿ ನಾಗರಹಾವು ಕಾಣಿಸಿಕೊಂಡಿದೆ.
ಮಹಾಬಲೇಶ್ವರ ಹೆಗಡೆ ಮನೆಯ ಪಕ್ಕದಲ್ಲೇ ತೆಂಗಿನಕಾಯಿಗಳನ್ನು ಒಣಗಿಸಲು ಶೆಡ್ ನಿರ್ಮಿಸಿದ್ದು, ತೆಂಗಿನಕಾಯಿಗಳನ್ನು ಒಣಗಿಸಲು ಹಾಕಿದ್ದರು. ಬೆಳಿಗ್ಗೆ ಎಂದಿನಂತೆ ಶೆಡ್ ಬಾಗಿಲು ತೆರೆದು ತೆಂಗಿನಕಾಯಿಗಳನ್ನು ಪರಿಶೀಲಿಸಲು ಬಂದ ವೇಳೆ ನಾಗರಹಾವು ಹೆಡೆಯೆತ್ತಿ ಬುಸುಗುಟ್ಟಿದೆ. ಆತಂಕಗೊಂಡ ಮಾಲೀಕ ಮಹಾಬಲೇಶ್ವರ ಹೆಗಡೆ ಕೂಡಲೇ ಶೆಡ್ ಬಾಗಿಲು ಹಾಕಿ ಅಕ್ಕಪಕ್ಕದವರಿಗೆ ಮಾಹಿತಿ ನೀಡಿದ್ದಾರೆ.
ನಂತರ ಉರಗಪ್ರೇಮಿ ರಾಜೀವ್ ನಾಯ್ಕ ಎಂಬುವವರಿಗೆ ಕರೆಮಾಡಿ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ರಾಜೀವ್ ನಾಯ್ಕ ಹರಸಾಹಸಪಟ್ಟು ನಾಗರಹಾವನ್ನು ಸೆರೆಹಿಡಿದು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಹಾವನ್ನು ಸೆರೆಹಿಡಿದ ಬಳಿಕ ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದು, ನಾಗರಹಾವು ಆಹಾರ ಅರಸಿ ಬಂದಿರಬಹುದೆಂದು ಅಂದಾಜಿಸಲಾಗಿದೆ.