ಬೆಂಗಳೂರು: ತಲಘಟ್ಟಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಖಾಸಗಿ ಬ್ಯಾಂಕ್ನ ಉದ್ಯೋಗಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಲಘಟ್ಟಪುರ ನಿವಾಸಿ ವಿವೇಕ್ ಸಮಾಧರ್ಸಿ(35) ಆತ್ಮಹತ್ಯೆ ಮಾಡಿಕೊಂಡ ಬ್ಯಾಂಕ್ ಉದ್ಯೋಗಿ. ಮಾರ್ಚ್ 6 ರಂದು ರಾತ್ರಿ ತಲಘಟ್ಟಪುರದ ಸ್ವಂತ ಫ್ಲಾಟ್ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
‘ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಪತ್ನಿ ಮೋನಿಷಾ ದೂರು ನೀಡಿದ್ದಾರೆ. ತನಿಖೆ ನಡೆಯುತ್ತಿದೆ. ಬ್ಯಾಂಕಿನ ಹಿರಿಯ ಅಧಿಕಾರಿಗಳ ಕಿರುಕುಳದಿಂದಾಗಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಹಾರದ ವಿವೇಕ್ ಸಮಾಧರ್ಸಿ ಅವರು ಕಳೆದ 5 ವರ್ಷಗಳಿಂದ ಕೋರಮಂಗಲದ ಖಾಸಗಿ ಬ್ಯಾಂಕಿನ ಸಾಲ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಪತ್ನಿ ಮತ್ತು ಮಕ್ಕಳೊಂದಿಗೆ ತಲಘಟ್ಟಪುರದ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದಾರೆ. ಮಾರ್ಚ್ 6 ರಂದು ಸಂಜೆ ಕೆಲಸ ಮುಗಿಸಿ ಮನೆಗೆ ಬಂದಿದ್ದ ವಿವೇಕ್, ಪತ್ನಿಯೊಂದಿಗೆ ಊಟ ಮಾಡಿದ್ದರು. ನಂತರ, ಅವರು ಏಕಾಂಗಿಯಾಗಿ ಮಲಗುವ ಕೋಣೆಗೆ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆತ್ಮಹತ್ಯೆಗೆ ಶರಣಾಗುವ ಮುನ್ನ ಬೆಡ್ ರೂಂ ಪಕ್ಕದ ಕೋಣೆಯಲ್ಲಿ ಕುಳಿತಿದ್ದ ಪತ್ನಿಗೆ ವಿಡಿಯೋ ಕಾಲ್ ಮಾಡಿ ವಿಡಿಯೋ ಕಾಲ್ ನಲ್ಲಿ ನೇಣು ಬಿಗಿದುಕೊಂಡ ವಿವೇಕ್, ಗುಡ್‌ಬಾಯ್, ಮತ್ತೆ ಯಾವತ್ತೂ ಸಿಗುವುದಿಲ್ಲ ಎಂದು ಹೇಳಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದರಿಂದ ಗಾಬರಿಗೊಂಡ ಆತನ ಪತ್ನಿ ಮೋನಿಷಾ ತನ್ನ ಗಂಡನ ಸ್ನೇಹಿತರು ಮತ್ತು ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ.
ನಂತರ, ಸ್ಥಳೀಯರು ಬಾಗಿಲು ಮುರಿದು, ಕುಣಿಕೆಯಿಂದ ಕೆಳಗಿಳಿಸಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಆತನನ್ನು ಪರೀಕ್ಷಿಸಿದ ವೈದ್ಯರು ವಿವೇಕ್ ಮೃತಪಟ್ಟಿದ್ದಾರೆ ಎಂದು ದೃಢಪಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.