ಕಾರವಾರ: ಕುಗ್ರಾಮಗಳಲ್ಲಿ ವಾಸಿಸುತ್ತಿರುವ ಶಾಲಾ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ಅನುಕೂಲವಾಗುವಂತೆ, ಕೈಗಾ ಅಣು ವಿದ್ಯುತ್ ಕೇಂದ್ರದ ಸಿ.ಎಸ್.ಆರ್ ಯೋಜನೆ ಅಡಿಯಲ್ಲಿ ಸೋಲಾರ್ ಲಾಟಿನ್‌ಗಳನ್ನು ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಯಿತು. ವಿದ್ಯುತ್ ವ್ಯತ್ಯಯವಾದಾಗ ಮಕ್ಕಳ ಶೈಕ್ಷಣಿಕ ಗುಣಮಟ್ಟ ಕುಸಿಯಬಾರದು ಎನ್ನುವ ಸದುದ್ದೇಶದಿಂದ ಈ ಕಾರ್ಯವನ್ನು ಕೈಗೊಳ್ಳಲಾಯಿತು.
ಸಿ.ಎಸ್.ಆರ್. ಕಮಿಟಿಯ ಅಧ್ಯಕ್ಷರು ಹಾಗೂ ಸದಸ್ಯರ ತಂಡದಿಂದ ಕೈಗಾ ಯೋಜನಾ ಅಧಿಕಾರಿಗಳು, ಸ್ಥಾನಿಕ ನಿರ್ದೇಶಕರು ಹಾಗೂ ಸ್ಥಳ ನಿರ್ದೇಶಕರುಗಳಿಂದ ವಿಶೇಷವಾಗಿ ಸೋಲಾರ್ ಲಾಟಿನ್ ಹಾಗೂ ಸೋಲಾರ್ ಪ್ಯಾನಲ್, ವಿದ್ಯುತ್ ಚಾರ್ಜರ್‌ಗಳನ್ನು ಹೊಂದಿದ ದೀಪದ ಸೆಟ್‌ನ್ನು ಪ್ರತಿ ಶಾಲಾ ಮಕ್ಕಳಿಗೆ ವಿತರಿಸಲಾಯಿತು.
ವಿತರಣಾ ಕಾರ್ಯದಲ್ಲಿ ಸಿ.ಎಸ್.ಆರ್ ಯೋಜನೆಯ ಅಧಿಕಾರಿಗಳಾದ ದಿನೇಶ ಗಾಂವಕರ ಹಾಗೂ ತಂಡದವರು ಕಾರವಾರ ನಗೆ ಶಾಲೆಗೆ ಬಂದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ವೇಳೆ ಶಾಲಾ ಮಕ್ಕಳು ಅತ್ಯಂತ ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಪ್ರತಿ ಮಗುವಿಗೆ ಒಂದರಂತೆ ಲಾಟಿನ್ ವಿತರಿಸಿದ್ದನ್ನು ಮಕ್ಕಳು ಸ್ವೀಕರಿಸಿ ಕೈಗಾ ಸಿ.ಎಸ್.ಆರ್ ಕಮೀಟಿಯ ನಿರ್ದೇಶಕರು, ಸ್ಥಾನಿಕ ನಿರ್ದೇಶಕರುಗಳಿಗೆ ಹಾಗೂ ಸಿ.ಎಸ್.ಆರ್ ಅಧ್ಯಕ್ಷರಾದ ಎನ್.ತಿಪ್ಪೇಸ್ವಾಮಿ ಅವರಿಗೆ ಮತ್ತು ತಂಡದ ಎಲ್ಲ ಸದಸ್ಯರಿಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದರು.
ಮುಖ್ಯಾಧ್ಯಾಪಕ ಅಖ್ತರ ಸೈಯದ್ ಅವರು ಮಾತನಾಡಿ, ಈ ಸೋಲಾರ್ ದೀಪ ಮಕ್ಕಳ ಶೈಕ್ಷಣಿಕ ಗುಣಮಟ್ಟಕ್ಕೆ, ವಿದ್ಯಾರ್ಜನೆಗೆ ದಾರಿದೀಪವಾಗಿದೆ. ಏಕೆಂದರೆ ಕೈಗಾ ಯೋಜನಾ ಪ್ರದೇಶಗಳಲ್ಲಿ ಅನೇಕ ಶಾಲೆಗಳು ಬೆಟ್ಟ ಗುಡ್ಡಗಳ ಮಧ್ಯದಲ್ಲಿದ್ದು, ವರ್ಷದ ಹೆಚ್ಚಿನ ದಿನಗಳಲ್ಲಿ ಗಿಡಮರಗಳು ಬೀಳುವುದರಿಂದ ವಿದ್ಯುತ್ ವ್ಯತ್ಯಯವಾಗುತ್ತಿರುತ್ತದೆ. ದೀಪ ನೀಡಿದ್ದಕ್ಕೆ ಶ್ಲಾಘನೀಯ ಕಾರ್ಯ ಎಂದು ದಿನೇಶ ಗಾಂವಕರ ತಂಡಕ್ಕೆ ಕೃತಜ್ಞತೆ ಸಲ್ಲಿಸಿದರು.
ಸಹಶಿಕ್ಷಕಿ ರೂಪಾ ಉಮೇಶ ನಾಯ್ಕ, ಅತಿಥಿ ಶಿಕ್ಷಕಿ ರೇಷ್ಮಾ ಹುಲಸ್ವಾರ, ಕೈಗಾ ಯೋಜನಾ ಶಿಕ್ಷಕಿ ಪ್ರಿಯಾ ಲಾಂಜೇಕರ ಹಾಗೂ ಮುದ್ದುಮಕ್ಕಳು ಹಾಜರಿದ್ದು, ಕಾರ್ಯಕ್ರಮ ವಿಶೇಷವಾಗಿ ನೆರವೇರಿತು.