ಶಿರಸಿ: ನಗರದ ಪ್ರಥಮ ದರ್ಜೆ ಪದವಿ ಕಾಲೇಜಿನ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಎನ್ ಎಸ್ ಎಸ್ ಕ್ಯಾಂಪ್ ನಲ್ಲಿ ಭಾಗಿಯಾಗಿದ್ದರು. ವಿಶೇಷತೆ ಎಂದರೆ ಅವರು ಕೃಷಿ ಭೂಮಿಯಲ್ಲಿ ಕೆಲಸ ಮಾಡುವ ಮೂಲಕ, ಕೃಷಿ ತಂತ್ರಗಳನ್ನು ಕಲಿಯುವ ಮೂಲಕ ಈ ಕ್ಯಾಂಪ್‌ನಲ್ಲಿ ಭಾಗಿಯಾಗಿದ್ದಾರೆ. ಶಿರಸಿ ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಅವರ ಊರಾದ ಮಳಲಗಾಂವ್‌ನಲ್ಲಿ, ಭಿಮಣ್ಣ ಅವರ ತೋಟದಲ್ಲಿಯೇ ವಿದ್ಯಾರ್ಥಿಗಳು ಖುದ್ದು ಶಾಸಕರಿಂದಲೇ ಕೃಷಿಯ ಮಾಹಿತಿ ಪಡೆದುಕೊಂಡರು.
ಶಾಸಕ ಭೀಮಣ್ಣ ನಾಯ್ಕ ಮೂಲತಃ ಕೃಷಿಯ ಹಿನ್ನಲೆ ಹೊಂದಿದವರು. ಅಡಕೆ ತೋಟ, ಭತ್ತದ ಗದ್ದೆಗಳಲ್ಲಿ ಸ್ವತಃ ಕಾರ್ಯ ನಡೆಸುವ ಮೂಲಕ ಮೇಲಕ್ಕೆ ಬಂದವರು. ಹೀಗಾಗಿ ಅವರಿಗೆ ಕೃಷಿ ತಂತ್ರಜ್ಞಾನಗಳು ಸಹಜವಾಗಿಯೇ ಬಂದಿವೆ. ಬಿಡುವಿನ ವೇಳೆಯಲ್ಲಿ ತಮ್ಮ ಮನೆಗೆ ತೆರಳಿ ಈಗಲೂ ಅವರು ಕೃಷಿ ಕಾರ್ಯದಲ್ಲಿ ಭಾಗಿಯಾಗುತ್ತಾರೆ.
ಗುರುವಾರ ವಿದ್ಯಾರ್ಥಿಗಳಿಗೆ ಚಾಲಿ ಅಡಕೆ ಸುಲಿಯುವುದು ಹೇಗೆ ಎಂಬುದನ್ನು ಅವರೇ ಹೇಳಿಕೊಟ್ಟರು, ಕಾಳು ಮೆಣಸು ಬಿಡಿಸುವುದು ಹೇಗೆ ಎಂಬ ಬಗ್ಗೆ ಮಾಹಿತಿ ನೀಡಿದರು. ತಮ್ಮ ತೋಟಕ್ಕೆ ವಿದ್ಯಾರ್ಥಿಗಳನ್ನು ಕರೆದೊಯ್ದು ಬೆಳೆಗಳು ಬಗ್ಗೆ, ಅವುಗಳ ರೋಗಗಳು, ನಿಯಂತ್ರಣಾ ಕ್ರಮಗಳ ಬಗ್ಗೆ ಮಾಹಿತಿಯನ್ನು ತಾವೇ ವಿವರಿಸಿದರು. ” ಕೃಷಿ ಎಂದಿಗೂ ನಂಬಿದವರನ್ನು ಕೈ ಬಿಡುವುದಿಲ್ಲ. ಕೃಷಿ ಕಾರ್ಯಕ್ಕಿಳಿಯಲು ಎಂದಿಗೂ ಹಿಂಜರಿಯಬಾರದು ” ಎಂಬ ಕಿವಿ ಮಾತನ್ನೂ ಹೇಳಿದರು.