ಕಾರವಾರ: ಸರಿಯಾಗಿ ಗಣಿತ ಲೆಕ್ಕ ಮಾಡದ ಕಾರಣಕ್ಕೇ ಶಾಲೆಯ ಶಿಕ್ಷಕಿಯೋರ್ವರು 5ನೇ ತರಗತಿ ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಥಳಿಸಿರುವ ಘಟನೆ ಹೊನ್ನಾವರ ತಾಲ್ಲೂಕಿನ ಹಳ್ಳಿಕಾರ ಕರ್ಕಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ತರಗತಿ ವೇಳೆ ಲೆಕ್ಕ ನೀಡಿದ್ದ ಗಣಿತ ಶಿಕ್ಷಕಿ, ವಿದ್ಯಾರ್ಥಿ ಸರಿಯಾಗಿ ಲೆಕ್ಕ ಮಾಡಿಲ್ಲವೆಂದು ಸಿಟ್ಟಾದ ಶಿಕ್ಷಕಿ, ತಿಳಿಸಿ ಹೇಳಿಕೊಡುವ ಬದಲು ವಿದ್ಯಾರ್ಥಿಗೆ ಮನಬಂದಂತೆ ಥಳಿಸಿದ್ದು ಬೆನ್ನಿನ ಮೇಲೆ ಬಾಸುಂಡೆ ಬರುವಂತೆ ಬಾರಿಸಿದ್ದಾರೆ. ಈ ವೇಳೆ ವಿದ್ಯಾರ್ಥಿ ನೋವು ತಡೆಯಲಾರದೇ ಒದ್ದಾಡಿದ್ದು, ಇದನ್ನು ನೋಡಿದ ಶಿಕ್ಷಕಿ, ಸಿಟ್ಟಿನಲ್ಲಿ ಈ ರೀತಿ ಆಗಿದ್ದು, ಮನೆಯವರಿಗೆ ಹೇಳದಂತೆ ವಿದ್ಯಾರ್ಥಿಗೆ ಸಮಾಧಾನ ಮಾಡಿ ಕಳುಹಿಸಿದ್ದಾರೆ.
ಶಾಲೆ ಮುಗಿಸಿ ಮನೆಗೆ ತೆರಳಿದ ವಿದ್ಯಾರ್ಥಿ ನೋವಿನಿಂದ ಪರದಾಡುತ್ತಿದ್ದು, ಈ ಕುರಿತು ವಿಚಾರಿಸಿದ ಪಾಲಕರಿಗೆ ವಿಷಯ ತಿಳಿಸಿದ್ದಾನೆ. ಕೂಡಲೇ ಆಕ್ರೋಶಗೊಂಡ ಪಾಲಕರು ಶಾಲೆಗೆ ತೆರಳಿ ಶಿಕ್ಷಕಿಯನ್ನು ವಿಚಾರಿಸಿದರೆ, ಅಲರ್ಜಿಯಿಂದ ಬೆನ್ನು ಕೆಂಪಾಗಿರಬಹುದು ಎಂದು ಸಮಜಾಯಿಸಿ ನೀಡಿ ತಪ್ಪಿಸಿಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ.
ಈ ಕುರಿತು ಪಾಲಕರು ಶಾಲೆಯ ಮುಖ್ಯೋಪಾಧ್ಯಾಯರಿಗೆ ಶಿಕ್ಷಕಿ ವಿರುದ್ಧ ದೂರು ನೀಡಿದ್ದಾರೆ. ಇಂದಿನಿಂದ 5ನೇ ತರಗತಿ ವಿದ್ಯಾರ್ಥಿಗಳಿಗೂ ಪರೀಕ್ಷೆ ಆರಂಭವಾಗುತ್ತಿದ್ದು, ವಿದ್ಯಾರ್ಥಿ ನೋವಿನಲ್ಲೇ ಪರೀಕ್ಷೆಗೆ ತೆರಳಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಬಗ್ಗೆ ಸಂಬಂಧಪಟ್ಟವರು ಶಿಕ್ಷಕಿ ವಿರುದ್ಧ ಕ್ರಮ ಕೈಗೊಳ್ಳಬೇಕು ಅನ್ನೋದು ಪಾಲಕರ ಆಗ್ರಹವಾಗಿದೆ.