ಮಂಡ್ಯ: ಮದ್ದೂರು ತಾಲ್ಲೂಕಿನ ದೇಶಹಳ್ಳಿ ಗ್ರಾಮದ ಮದ್ದೂರಮ್ಮನ ಕೆರೆಯಲ್ಲಿ ಈಜಲು ತೆರಳಿದ್ದ ಬಾಲಕರಿಬ್ಬರು ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಸಂಭವಿಸಿದೆ. ಶಂಕರಪುರ ಗ್ರಾಮದ ರಂಜು(17) ಹಾಗೂ ಮುತ್ತುರಾಜು(14) ಮೃತ ದುರ್ದೈವಿ ಬಾಲಕರಾಗಿದ್ದಾರೆ.
ಶಾಲೆಗೆ ರಜೆ ಇದ್ದ ಹಿನ್ನಲೆ ಐವರು ಸ್ನೇಹಿತರು ಒಟ್ಟಾಗಿ ಮದ್ದೂರಮ್ಮನ ಕೆರೆಗೆ ಈಜಲು ತೆರಳಿದ್ದರು. ಈ ವೇಳೆ ಈ ಇಬ್ಬರು ಬಾಲಕರು ಈಜು ಬಾರದೇ ಕೆಸರಿನಲ್ಲಿ ಸಿಲುಕಿದ್ದು, ಮೇಲೆ ಬರಲಾಗದೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಕುಟುಂಬಸ್ಥರು, ಸ್ಥಳೀಯರು ತೆಪ್ಪದ ಮೂಲಕ ಕೆರೆಯಲ್ಲಿ ಹುಡುಕಾಟ ನಡೆಸಿದ್ದು, ಬಾಲಕ ಮುತ್ತುರಾಜು ಮೃತದೇಹ ಮಾತ್ರ ಪತ್ತೆಯಾಗಿದೆ. ಇನ್ನೋರ್ವ ಯುವಕ ರಾಜುವಿಗಾಗಿ ಶೋಧ ಕಾರ್ಯ ಮುಂದುವರೆದಿದ್ದು, ಕುಟುಂಬಸ್ಥರ ಆಕ್ರಂದನ ಮುಂದುವರೆದಿದೆ. ಸ್ಥಳಕ್ಕೆ ಬೆಸಗರಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.