ಬೆಂಗಳೂರು: ನಾಲ್ಕು ತಿಂಗಳ ಹಿಂದೆ 59 ವರ್ಷದ ಮಹಿಳೆಯನ್ನು ಕೊಂದು ಶವವನ್ನು ಬಾಗಲೂರಿನ ಹೊಸುರುಬಂದೆಯ ಡಂಪ್ ಯಾರ್ಡ್ನಲ್ಲಿ ಎಸೆದ ಆರೋಪದ ಮೇಲೆ 35 ವರ್ಷದ ಆಟೋರಿಕ್ಷಾ ಚಾಲಕ ಮತ್ತು ಅರೆಕಾಲಿಕ ವಾಟರ್ ಮ್ಯಾನ್ ನನ್ನು ಬಂಧಿಸಲಾಗಿದೆ. ಆರೋಪಿ ಬಂಧನದ ನಂತರ, ಪೊಲೀಸರು ಅಂಗಳದಿಂದ ಕೊಳೆತ ದೇಹವನ್ನು ವಶಪಡಿಸಿಕೊಂಡಿದ್ದಾರೆ.
ಡಿ. ಮೇರಿಯನ್ನು ಕೊಂದ ಆರೋಪದ ಮೇಲೆ ಲಕ್ಷ್ಮಣನನ್ನು ಕೊಥನೂರು ಪೊಲೀಸರು ಬಂಧಿಸಿದ್ದರು. ಸಂತ್ರಸ್ತೆ ಮತ್ತು ಆರೋಪಿ ಇಬ್ಬರೂ ನಾಗೆನಹಳ್ಳಿಯ ಸ್ಲಂ ಬೋರ್ಡ್ ಕಾಲೋನಿಯಲ್ಲಿ ವಾಸಿಸುತ್ತಿದ್ದರು.
ಪತಿಯ ಸಾವಿನ ನಂತರ ಸಂತ್ರಸ್ತೆ ಒಬ್ಬಳೇ ವಾಸಿಸುತ್ತಿದ್ದರು. ಆಕೆಯೂ ಸಹ ಆರೋಪಿಯ ಪರಿಚಯ ಹೊಂದಿದ್ದು, ಕೆಲವೊಮ್ಮೆ ಆತನ ಸಹಾಯವನ್ನು ಪಡೆದಿದ್ದಳು. ಆರೋಪಿ 2 ಲಕ್ಷ ರೂಪಾಯಿ ಸಾಲವನ್ನು ಹೊಂದಿದ್ದು ಆಕೆಯನ್ನು ಕೊಂದು, ಆಕೆಯ ಚಿನ್ನದ ಆಭರಣಗಳನ್ನು ದರೋಡೆ ಮಾಡಲು ಸಂಚು ರೂಪಿಸಿದ್ದ.
ನವೆಂಬರ್ 25 ರಂದು, ಆಕೆ ರಿಪೇರಿಗಾಗಿ ತನ್ನನ್ನು ಕರೆಯುತ್ತಾಳೆ ಎಂಬ ಭರವಸೆಯಲ್ಲಿ ಆತ ಆಕೆಯ ಮನೆಯ ವಿದ್ಯುತ್ ಸರಬರಾಜನ್ನು ಕಡಿತಗೊಳಿಸಿದ್ದ. ಆದರೆ ಅದನ್ನು ಸರಿಪಡಿಸಲು ಆಕೆ ಇನ್ನೊಬ್ಬ ವ್ಯಕ್ತಿಯನ್ನು ಕರೆದಿದ್ದಳು. ಹೀಗಾಗಿ ಮರುದಿನ ಮಧ್ಯಾಹ್ನ, ಆತ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದ. ಬಳಿಕ ಆಕೆಯ 50 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳವು ಮಾಡಿ, ಆಕೆಯ ಶವವನ್ನು ಬಟ್ಟೆಯಲ್ಲಿ ಸುತ್ತಿಕೊಂಡು ತನ್ನದೇ ಆಟೋದಲ್ಲಿ ಸಾಗಿಸಿ, ಡಂಪ್ ಯಾರ್ಡ್‌ನಲ್ಲಿ ಎಸೆದಿದ್ದ.
ಆಕೆ ನಾಪತ್ತೆಯಾದ ನಂತರ, ಮೇರಿಯ ಸೊಸೆ ಪೊಲೀಸರಿಗೆ ಕಾಣೆಯಾದ ಬಗ್ಗೆ ದೂರು ನೀಡಿದ್ದಳು. ಸ್ಥಳೀಯ ಗುಪ್ತಚರ ಮಾಹಿತಿಯ ಮೂಲಕ, ಲಕ್ಷ್ಮಣ ಸಹ ಸಂತ್ರಸ್ತೆಯ ನಿವಾಸದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದಾನೆ ಎಂದು ಪೊಲೀಸರು ಪತ್ತೆಹಚ್ಚಿದ್ದರು.
ಲಕ್ಷ್ಮಣನ ಬಳಿ ನಾಲ್ಕು ಸಿಮ್ ಕಾರ್ಡ್ಗಳಿದ್ದವು, ಅವುಗಳಲ್ಲಿ ಮೂರು ಸಕ್ರಿಯವಾಗಿದ್ದವು ಮತ್ತು ಒಂದು ಸ್ವಿಚ್ ಆಫ್ ಆಗಿತ್ತು. ಸಕ್ರಿಯವಾಗಿದ್ದ ಸಿಮ್ಗಳು ಡಿಜೆ ಹಳ್ಳಿಯಲ್ಲಿರುವ ಆತನ ಪತ್ನಿಯ ಮನೆಯಲ್ಲಿದ್ದವು. ಪೊಲೀಸರು ಆತನ ಮೇಲೆ ನಿಗಾ ಇರಿಸಿ, ಸ್ವಲ್ಪ ಸಮಯದಿಂದ ಬಳಕೆಯಲ್ಲಿಲ್ಲದ ಸಂಖ್ಯೆಯಿಂದ ಆತ ತನ್ನ ಮಹಿಳಾ ಸ್ನೇಹಿತೆಗೆ ಕರೆ ಮಾಡಿದ್ದನ್ನು ಕಂಡುಕೊಂಡರು. ಈ ಮೂಲಕ ಪೊಲೀಸರು ಆತನನ್ನು ಪತ್ತೆಹಚ್ಚಿದ್ದಾರೆ. ವಿಚಾರಣೆ ವೇಳೆ ಆತ ಕೊಲೆಯನ್ನು ಒಪ್ಪಿಕೊಂಡಿದ್ದಾಗಿ ತಿಳಿದುಬಂದಿದೆ.